ಟೆಕ್ಸಾಸ್ : ಅಮೆರಿಕದ ಅನ್ನಾದಲ್ಲಿ ಆ 30 ರಂದು ವಾಹನಗಳ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ತೆಲಂಗಾಣದ ಮೂವರು ಸೇರಿದಂತೆ ನಾಲ್ವರು ಭಾರತೀಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಗಳು ಹೈದರಾಬಾದ್‌ನ ಕುಕಟ್‌ಪಲ್ಲಿ ಉಪನಗರದ ಆರ್ಯನ್ ರಘುನಾಥ್ ಒರಂಪಟ್ಟಿ, ಅವರ ಸ್ನೇಹಿತ ಫಾರೂಕ್ ಶೇಖ್, ಲೋಕೇಶ್ ಪಾಲಾಚಾರ್ಲಾ ಮತ್ತು ತಮಿಳುನಾಡಿನ ದರ್ಶಿನಿ ವಾಸುದೇವ್ ಎಂದು ಗುರುತಿಸಲಾಗಿದೆ.
ಬೆಂಟೊನ್‌ವಿಲ್ಲೆಗೆ ಪ್ರಯಾಣಿಸಲು ನಾಲ್ವರು ಕಾರ್‌ಪೂಲಿಂಗ್ ಅಪ್ಲಿಕೇಶನ್ ಮೂಲಕ ಸಂಪರ್ಕ ಹೊಂದಿದ್ದರು. ಐದು ವಾಹನಗಳ ಘರ್ಷಣೆಯ ವೇಳೆ ವೇಗವಾಗಿ ಬಂದ ಟ್ರಕ್ ಅಪ್ಪಳಿಸಿ ಭೀಕರ ಅವಘಡ ಸಂಭವಿಸಿದೆ. ಭಾರತೀಯರು ಪ್ರಯಾಣಿಸುತ್ತಿದ್ದ ಎಸ್ ಯುವಿ ಗೆ ಅಪ್ಪಳಿಸಿದ ಪರಿಣಾಮ ಬೆಂಕಿ ಹೊತ್ತಿಕೊಂಡು ನಾಲ್ವರು ಸುಟ್ಟು ಕರಕಲಾಗಿದ್ದಾರೆ.
ಓರಂಪಟ್ಟಿ ಮತ್ತು ಶೇಖ್ ಅವರು ಡಲ್ಲಾಸ್‌ನಲ್ಲಿರುವ ಸೋದರ ಸಂಬಂಧಿಯನ್ನು ಭೇಟಿ ಮಾಡಿ ಹಿಂತಿರುಗುತ್ತಿದ್ದರು. ದರ್ಶಿನಿ ವಾಸುದೇವ್ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅರ್ಕಾನ್ಸಾಸ್‌ನಲ್ಲಿರುವ ಚಿಕ್ಕಪ್ಪನನ್ನು ಭೇಟಿ ಮಾಡಲು ಹೊರಟಿದ್ದರು.
ದೀರ್ಘ ವಾರಾಂತ್ಯ ಮತ್ತು ಡಿಎನ್‌ಎ ಫಿಂಗರ್‌ಪ್ರಿಂಟ್‌ನ ಅಗತ್ಯತೆಯಿಂದಾಗಿ ಮೃತದೇಹಗಳ ಗುರುತಿಸುವಿಕೆ ವಿಳಂಬವಾಗಿದ್ದು ಗುರುತನ್ನು ದೃಢೀಕರಿಸಲು ಮೂಳೆಯ ಅವಶೇಷಗಳನ್ನು ಬಳಸಿಕೊಳ್ಳಲಾಗುತ್ತಿದೆ.
“ದರ್ಶಿನಿಯ ಚಿಕ್ಕಪ್ಪ ರಾಮಾನುಜಂ ಅರ್ಕಾನ್ಸಾಸ್‌ನ ಬೆಂಟನ್‌ವಿಲ್ಲೆಯಲ್ಲಿ ವಾಸಿಸುತ್ತಿದ್ದು, ಸ್ನಾತಕೋತ್ತರ ಪದವಿ ಮುಗಿಸಿ ಡಲ್ಲಾಸ್‌ನ ಫ್ರಿಸ್ಕೊದಲ್ಲಿ ಕೆಲಸ ಆರಂಭಿಸಿದ್ದರು’ ಎಂದು ಮಂಜುನಾಥ್ ತಿಳಿಸಿದರು.
“ಉಮರ್ ಫಾರೂಕ್ ಶೇಖ್ ಮತ್ತು ಆರ್ಯನ್ ರಘುನಾಥ್ ಒರಂಪಟ್ಟಿ ಅವರು ಡಲ್ಲಾಸ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಇತ್ತೀಚಿನ ಪದವೀಧರರಾಗಿದ್ದರು, ವಾಹನ ಚಲಾಯಿಸುತ್ತಿದ್ದ ಲೋಕೇಶ್ ಕೂಡ ವೃತ್ತಿನಿರತರಾಗಿದ್ದರು ಎಂದು ತಿಳಿದು ಬಂದಿದೆ.