Advertisement

Tragedy: ದೆಹಲಿಯಲ್ಲಿ ಭೀಕರ ಬೆಂಕಿ ಅವಘಡ… 9 ತಿಂಗಳ ಮಗು ಸೇರಿ ನಾಲ್ವರು ಮೃತ್ಯು

08:40 AM Jan 27, 2024 | Team Udayavani |

ನವದೆಹಲಿ: ಶಹದಾರ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದ ನೆಲ ಮಹಡಿಯಲ್ಲಿರುವ ಮನೆಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಒಂಬತ್ತು ತಿಂಗಳ ಹೆಣ್ಣು ಮಗು ಸೇರಿದಂತೆ ನಾಲ್ವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಶುಕ್ರವಾರ ಸಂಜೆ ಶಹದಾರ ಪ್ರದೇಶದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ 5:22 ಕ್ಕೆ ಕರೆ ಬಂದಿತ್ತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಐದು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು ಸಂಜೆ 6:55 ರ ಹೊತ್ತಿಗೆ ಬೆಂಕಿಯನ್ನು ನಂದಿಸಲಾಯಿತು. ಕಟ್ಟಡದ ನೆಲ ಅಂತಸ್ತಿನ ಮನೆಯೊಂದರಲ್ಲಿ ಇರಿಸಲಾಗಿದ್ದ ವೈಪರ್‌ಗಳು ಮತ್ತು ರಬ್ಬರ್ ಕತ್ತರಿಸುವ ಯಂತ್ರದಂತಹ ರಬ್ಬರ್ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ” ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್) ಮುಖ್ಯಸ್ಥ ಅತುಲ್ ಗರ್ಗ್ ಹೇಳಿದ್ದಾರೆ.

ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸಹಾಯದಿಂದ ಮೂವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ ಅರೆಪ್ರಜ್ಞಾವಸ್ಥೆಯಲ್ಲಿದ್ದ ಒಂಬತ್ತು ತಿಂಗಳ ಮಗು ಸೇರಿದಂತೆ ನಾಲ್ವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟೋತ್ತಿಗಾಗಲೇ ನಾಲ್ವರು ಮೃತಪಟ್ಟಿದ್ದರು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Advertisement

28 ಮತ್ತು 40 ವರ್ಷದ ಇಬ್ಬರು ಮಹಿಳೆಯರು ಜೊತೆಗೆ ಒಂಬತ್ತು ತಿಂಗಳ ಹೆಣ್ಣು ಮಗು ಮತ್ತು 17 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. 16 ವರ್ಷದ ಬಾಲಕಿ ಮತ್ತು 70 ವರ್ಷದ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಟ್ಟಡವು ನಾಲ್ಕು ಮಹಡಿಗಳನ್ನು ಹೊಂದಿದ್ದು ಸದ್ಯ ಘಟನೆಗೆ ಸಂಬಂಧಿಸಿ ಕಟ್ಟಡ ಮಾಲೀಕ ಭರತ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next