ಧಾರವಾಡ : ಹಳೆಯ ಬಸದಿ ಜಾಗೆಯ ೧೦ ಅಡಿಯ ಆಳಯದಲ್ಲಿ ಪುರಾತನ ಕಾಲದ ಜೈನ್ ತೀರ್ಥಂಕರ ನಾಲ್ಕು ವಿಗ್ರಹಗಳು ಪತ್ತೆಯಾಗಿರುವ ಘಟನೆ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಚಾತುರ್ಮಾಸದ ಪ್ರಯುಕ್ತ ಗ್ರಾಮದಲ್ಲಿ ತಂಗಿರುವ ಮುನಿಶ್ರೀ ಪ್ರಸಂಗಸಾಗರ ಮಹಾರಾಜರ ಮುನಿ ನಿವಾಸಕ್ಕಾಗಿ ಹಳೆಯ ಬಸದಿ ಜಾಗದಲ್ಲಿ ಅಗೆತ ಮಾಡಲಾಗಿದೆ. ಈ ವೇಳೆ ೧೦ ಅಡಿ ಆಳದಲ್ಲಿ ೮ನೇ ಶತಮಾನಕ್ಕಿಂತಲೂ ಹಳೆಯದು ಎನ್ನಲಾದ ತೀರ್ಥಂಕರ ಮೂರ್ತಿಯೊಂದುದೊರೆತಿದೆ. ಮತ್ತೆ ಇದರ ಕೆಳಗಡೆ ಅಗೆಯುತ್ತಾ ಹೋದಂತೆ ಮತ್ತೆ ಮೂರು ಮೂರ್ತಿಗಳು ದೊರೆತಿವೆ.
ಭಗವಾನ ಪಾರ್ಶ್ವನಾಥ ಮೂರ್ತಿ, ಭಗವಾನ ಆದಿನಾಥ ಮೂರ್ತಿ, ಭಗವಾನ ನೇಮಿನಾಥ ಮೂರ್ತಿ ಹಾಗೂ ಭಗವಾನ ಮುನಿಸುವ್ರತನಾಥ ಮೂರ್ತಿಗಳು ಸೇರಿದಂತೆ ಒಟ್ಟು ಪುರಾತನ ನಾಲ್ಕು ವಿಗ್ರಹಗಳು ಇವಾಗಿವೆ. ಈ ಮೂರ್ತಿಗಳ ಮೇಲೆ ಹಳೆಗನ್ನಡದಲ್ಲಿ ಶಾಸನ ಇರುವುದು ಕಂಡು ಬಂದಿರುವುದು ಕುತೂಹಲಕ್ಕೂ ಕಾರಣವಾಗಿದೆ.
ಕೆಲ ವರ್ಷಗಳ ಹಿಂದೆ ಈ ಜಾಗದಲ್ಲಿಯೇ ಭಗವಾನ ಆದಿನಾಥರ ಹಾಗೂ ಭಗವಾನ ವಿಮಲನಾಥ ತೀರ್ಥಂಕರರ ಮೂರ್ತಿಗಳು ದೊರೆತಿದ್ದವು ಎಂದು ಗ್ರಾಮಸ್ಥರು ಹೇಳುತ್ತಾರೆ. ಈಗ ದೊರೆತಿರುವ ಈ ಹಳೆಯ ವಿಗ್ರಹಗಳನ್ನು ನೋಡಲು ಕೊಟಬಾಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ಆಗಮಿಸಿ, ದರ್ಶನ ಪಡೆಯುತ್ತಿದ್ದಾರೆ. ಸದ್ಯ ಈ ಮೂರ್ತಿಗಳ ಈಕುರಿತು ಪುರಾತತ್ವ ಇಲಾಖೆ ಇವು ಎಷ್ಟನೇ ಶತಮಾನದ ವಿಗ್ರಹಗಳು ಎಂಬುದನ್ನು ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ.
“ಕೊಟಬಾಗಿ ಗ್ರಾಮದ ಹಳೆಯ ಬಸದಿ ಜಾಗದಲ್ಲಿ ಶನಿವಾರ ಅಗೆದಾಗ ಪುರಾತನ ಕಾಲದ ನಾಲ್ಕು ತೀರ್ಥಂಕರ ಮೂರ್ತಿಗಳು ಸಿಕ್ಕಿದ್ದು, ಇದು ಈ ಭಾಗದಲ್ಲಿ ಜೈನ್ ಧರ್ಮ ಪ್ರಚಲಿತದ ಕುರುಹುಗಳಾಗಿವೆ. ಈ ಬಗ್ಗೆ ಮತ್ತಷ್ಟು ಅಧ್ಯಯನ, ಸಂಶೋಧನೆಗಳಾದರೆ ಒಳಿತು” ಎಂದು ಮುನಿಶ್ರೀ ಪ್ರಸಂಗಸಾಗರ ಮಹಾರಾಜರು ತಿಳಿಸಿದರು.