Advertisement

ಪಶು ಸಂಗೋಪನಾ ಇಲಾಖೆ ನಾಲ್ಕೂ ಉಪನಿರ್ದೇಶಕರ ಹುದ್ದೆ ಖಾಲಿ

11:43 AM Dec 20, 2018 | |

ಕಲಬುರಗಿ: ದನ-ಕರುಗಳು ಹಾಗೂ ಪಶು ಸಂಪತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪಶು ಸಂಗೋಪನಾ ಇಲಾಖೆಯ ವಿವಿಧ ಉಪನಿರ್ದೇಶಕರ (ಡಿಡಿ) ನಾಲ್ಕೂ ಹುದ್ದೆಗಳು ಖಾಲಿ ಬಿದ್ದಿವೆ. ಹೀಗಾಗಿ ನೇಗಿಲಯೋಗಿಗೆ ಸ್ಪಂದಿಸುವ ಪಶು ವೈದ್ಯಕೀಯ ಇಲಾಖೆಯ ಎಲ್ಲಾ ನಾಲ್ಕೂ ಡಿಡಿ ಹುದ್ದೆಗಳು ಕಳದೆರಡು ವರ್ಷಗಳಿಂದ ಪ್ರಭಾರಿಯಲ್ಲಿಯೇ ಮುನ್ನಡೆದಿವೆ.

Advertisement

ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕ, ಪಾಲಿಕ್ಲಿನಿಕ್‌ ನಿರ್ವಹಣೆ ಉಪರ್ದೇಶಕ ಹಾಗೂ ಪಶು ವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕ ಹೀಗೆ ನಾಲ್ಕೂ ಹುದ್ದೆಗಳು ಖಾಲಿ ಇವೆ. ಅದರಲ್ಲೂ ಸಹಾಯಕ ನಿರ್ದೇಶಕರೊಬ್ಬರೇ ಎರಡೆರಡು ಉಪನಿರ್ದೇಶಕ ಹುದ್ದೆಗಳನ್ನು ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಲಾಖೆಯ ಮಾತೃ ಹಾಗೂ ಪ್ರಮುಖ ಹುದ್ದೆಯಾಗಿರುವ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರ ಹುದ್ದೆಯಾದರೂ ಪ್ರಭಾರಿಯಾಗಿರದೇ ಪೂರ್ಣ ಪ್ರಮಾಣದಲ್ಲಿ ಇರಬೇಕಿತ್ತು. ಡಾ| ನಾಮದೇವ ರಾಠೊಡ ಅವರೇ ಪ್ರಭಾರಿಯಾಗಿ ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಇವರೇ ಪಾಲಿಕ್ಲಿನಿಕ್‌ ಪ್ರಭಾರಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇದೇ ಎರಡು ಡಿಡಿಗಳು ಅಫಜಲಪುರ ತಾಲೂಕಾ ಪಂಚಾಯತ್‌ ಕಾರ್ಯ ನಿರ್ವಾಹಣಾಧಿಕಾರಿಯಾಗಿ ಎರಡು ವರ್ಷಕಾಲ ಪ್ರಭಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸಹಾಯಕ ನಿರ್ದೇಶಕರಾಗಿರುವ ಡಾ| ನಾಮದೇವ ರಾಠೊಡ ಅವರು 2013-14 ರಿಂದ ಎಡಿ ಜತೆಗೆ ಹಲವು ಹುದ್ದೆಗಳ  ರ್ಯಭಾರ ವಹಿಸುತ್ತಾ ಇಲ್ಲಿಯೇ ಠಿಕಾಣಿ ಹೂಡಿದ್ದಾರೆ.

ಇನ್ನುಳಿದಂತೆ ಕುರಿ ಮತ್ತು ಉಣ್ಣೆ ನಿಗಮದ ಪ್ರಭಾರಿ ಉಪನಿರ್ದೇಶಕರಾಗಿ ಡಾ. ಶಿವಕುಮಾರ ಜಂಬಲದಿನ್ನಿ ಹಾಗೂ ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕರಾಗಿ ಡಾ| ನಾನಾಗೌಡ ಹಳ್ಳಿ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

 ಎಡಿ ಹುದ್ದೆಗಳು ಪ್ರಭಾರಿ: ಡಿಡಿಯಲ್ಲದೇ ತಾಲೂಕಾ ಸಹಾಯಕ ನಿರ್ದೇಶಕರ (ಎಡಿ) ಹುದ್ದೆಗಳಲ್ಲೂ ಪ್ರಭಾರಿಗಳದ್ದೇ ಕಾರುಬಾರು ಎನ್ನುವಂತಾಗಿದೆ. ಚಿಂಚೋಳಿ, ಆಳಂದ ಹಾಗೂ ಚಿತ್ತಾಪುರ ಈ ಮೂರು ತಾಲೂಕುಗಳಲ್ಲಿ ಎಡಿ ಹುದ್ದೆಗಳನ್ನು ಪ್ರಭಾರಿಯಾಗಿ ಮುನ್ನಡೆಸಲಾಗುತ್ತಿದೆ. ಹಿರಿಯ ಪಶು ವೈದ್ಯಕೀಯ ಪರೀಕ್ಷಕರೇ ಇವುಗಳನ್ನು ನಿರ್ವಹಿಸುತ್ತಿದ್ದಾರೆ. ಒಟ್ಟಾರೆ ಪಶು ಸಂಗೋಪನಾ ಇಲಾಖೆಯೇ ಪ್ರಭಾರಿ ಎನ್ನುವಂತಾಗಿದೆ.

ವಿಭಾಗೀಯ ಕೇಂದ್ರ ಹೊಂದಿರುವ ಕಲಬುರಗಿ ಜಿಲ್ಲೆಯ ಪಶು ಸಂಗೋಪನಾ ಇಲಾಖೆಯ ನಾಲ್ಕೂ ಉಪನಿರ್ದೇಶಕರ ಹುದ್ದೆಗಳು ಅದರಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿನಿಧಿಸುವ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲೂ ಎಡಿ ಹುದ್ದೆ ಪ್ರಭಾರಿಯಾಗಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ ಎನ್ನಬಹುದು. 

ಆಡಳಿತದ ಮೇಲೆ ಪರಿಣಾಮ: ಮಹತ್ವದ ಪಶು ಸಂಗೋಪನಾ ಇಲಾಖೆ ನಾಲ್ಕೂ ಡಿಡಿ ಹುದ್ದೆಗಳು ಪ್ರಭಾರಿಯಲ್ಲಿರುವುದು ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಹೀಗಾಗಿ ಇಲಾಖೆ ಕಾರ್ಯಕ್ರಮಗಳು ನಿಗದಿತವಾಗಿ ನಡೆಯದೇ ವಿಳಂಬವಾಗುತ್ತಿವೆ. ಜಿಲ್ಲೆಯ ಹಲವು ತಾಲೂಕುಗಳಲ್ಲಿ ಪಶುಭಾಗ್ಯ ಫಲಾನುಭವಿಗಳನ್ನು
ಅಂತಿಮಗೊಳಿಸಿಲ್ಲ. ಅದೇ ರೀತಿ ಇತರ ಕಾರ್ಯಗಳಲ್ಲೂ ನಿರೀಕ್ಷಿತ ಪ್ರಮಾಣದಲ್ಲಿ ಕಾರ್ಯಗಳು ನಡೆಯುತ್ತಿಲ್ಲ.

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ: ರಾಜ್ಯದ ವಿಭಾಗಕ್ಕೊಂದು ಪಶುಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳು ಸ್ಥಾಪನೆಯಾಗುತ್ತಿವೆ. ಈ ನಿಟ್ಟಿನಲ್ಲಿ ಪಶು ಸಂಗೋಪನಾ ಇಲಾಖೆ ಆವರಣದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಗೆಂದು ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದೆ. ಇಂತಹ ಭವ್ಯ ಕಟ್ಟಡಕ್ಕೆ ಅಡಿಗಲ್ಲು ನೆರವೇರಿಸದೇ ಆರಂಭಗೊಳಿಸಲಾಗಿದೆ ಎಂದರೆ ಇಲಾಖೆ ಕಾರ್ಯವೈಖರಿ ಅರ್ಥೈಯಿಸಿಕೊಳ್ಳಬಹುದು. ಕಟ್ಟಡ ನಿರ್ಮಾಣ ಕಾರ್ಯ ಗುಣಮಟ್ಟದಲ್ಲಿ ನಡೆಯುತ್ತಿಲ್ಲ ಎನ್ನು ಆರೋಪಗಳು ಕೇಳಿ ಬರುತ್ತಿದ್ದರೂ ಯಾರೂ ಪರಿಶೀಲನೆ ಮಾಡುತ್ತಿಲ್ಲ.

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next