Advertisement

ಒಂದೇ ಕುಟುಂಬದ ನಾಲ್ವರ ಸಾವು

12:36 PM Sep 13, 2018 | Team Udayavani |

ಬೆಂಗಳೂರು: ಸಂಬಂಧಿಯೊಬ್ಬರ ಅಂತ್ಯಕ್ರಿಯೆ ಮುಗಿಸಿ ಮನೆಗೆ ವಾಪಸ್‌ ಹೋಗುವಾಗ ಬಿಎಂಟಿಸಿ ಬಸ್‌ ಮತ್ತು ಕಾರಿನ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೊಡ್ಡನೆಕ್ಕುಂದಿಯ ಇಸ್ರೋ ಜಂಕ್ಷನ್‌ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.

Advertisement

ದೊಡ್ಡನಕ್ಕುಂದಿ ಹಾಗೂ ಮುನೆಕೊಳಲು ನಿವಾಸಿಗಳಾದ ಲೇವಿನ್‌ (24), ಲೇವಿನ್‌ ತಾಯಿ ನಿರ್ಮಲಾ ಜೋಸೆಫ್, ನಿರ್ಮಲಾ ಅವರ ನಾದಿನಿ ರೀನಾ (50), ಸಂಬಂಧಿ ಯಲಸಮ್ಮ ರೀನಾ ಮೃತಪಟ್ಟಿದ್ದು, ಶ್ರೀಜಾ (53) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರು ಚಾಲಕನ ಅಜಾಗರೂಕತೆಯಿಂದಲೇ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಘಟನೆಯಲ್ಲಿ ವೋಲ್ವೋ ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ ಎಂದು ಸಂಚಾರ ಪೊಲೀಸರು ತಿಳಿಸಿದರು.

ಹಲಸೂರು ನಿವಾಸಿ ಲೇವಿನ್‌ ಅವರ ದೊಡ್ಡಪ್ಪ ಹಲಸೂರಿನಲ್ಲಿ ಮೃತಪಟ್ಟಿದ್ದರು. ಹೀಗಾಗಿ ಲೇವಿನ್‌ ತನ್ನ ಕಾರಿನಲ್ಲಿ ತಾಯಿ ಹಾಗೂ ಸಂಬಂಧಿಕರನ್ನು ಅಂತ್ಯಕ್ರಿಯೆಗೆ ಕರೆದೊಯ್ದಿದ್ದರು. ಅಂತ್ಯಕ್ರಿಯೆ ಮುಗಿಸಿಕೊಂಡು ಕಾರಿನಲ್ಲಿ ವಾಪಸ್‌ ಹೋಗುವಾಗ ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಇಸ್ರೋ ಜಂಕ್ಷನ್‌ ಬಳಿ ಅತಿ ವೇಗವಾಗಿ ಬರುತ್ತಿದ್ದ ಲೇವಿನ್‌
ಮತ್ತೂಂದು ಕಾರನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಎದುರಿಗೆ ಬರುತ್ತಿದ್ದ ವೋಲ್ವೋ ಬಸ್‌ ಕಡೆ ಕಾರು ತಿರುಗಿಸಿದ್ದಾರೆ.

ಇದೇ ವೇಳೆ ಡಿಪೋದಿಂದ ವಿಮಾನ ನಿಲ್ದಾಣ ಕಡೆ ಹೋಗುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್‌ ಚಾಲಕ ಕಾರಿನ ವೇಗ ಕಂಡು ಏಕಾಏಕಿ ಬ್ರೇಕ್‌ ಹಾಕಿ ನಿಲ್ಲಿಸಿದ್ದರು. ಬಸ್‌ ನಿಂತ ಮೇಲೆ ಕಾರು ಬಸ್‌ಗೆ ಡಿಕ್ಕಿಯಾಗಿದೆ. ಪರಿಣಾಮ
ಕಾರು ಚಾಲಕ ಲೇವಿನ್‌ ಹಾಗೂ ರೀನಾ ಸ್ಥಳದಲ್ಲೇ ಮೃತಪಟ್ಟರೆ, ನಿರ್ಮಲಾ ಹಾಗೂ ಯಲಸಮ್ಮ ಚಿಕಿತ್ಸೆ ಫ‌ಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದರು. ಪ್ರಕರಣ ಎಚ್‌ಎಎಲ್‌ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಹೋದರನ ಅಗಲಿಕೆ ದುಃಖದಲ್ಲಿದ್ದ ಜೋಸೆಫ್‌ ತಮ್ಮ ಮಗ ಮತ್ತು ಪತ್ನಿ ಹಾಗೂ ಪತ್ನಿಯ ಸಹೋದರಿಯ ದಾರುಣ ಸಾವು ಕಂಡು ಗೋಳಾಡುತ್ತಿದ್ದರು.
ಘಟನೆ ಸಂಬಂಧ ಬಿಎಂಟಿಸಿ ಬಸ್‌ ಚಾಲಕ ನಾಗೇಶ್‌ರಿಂದ ದೂರು ಪಡೆಯಲಾಗಿದೆ. ಅಪಘಾತದಲ್ಲಿ ಬಸ್‌ ಚಾಲಕನ ಪಾತ್ರ ಕಂಡು ಬಂದಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಸಂಚಾರ ಪೊಲೀಸರು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next