ಬೆಂಗಳೂರು: ನಗರದ ನಾಲ್ಕು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮತ್ತು ಶನಿವಾರ ನಡೆದ ರಸ್ತೆ ಅಪಘಾತಗಳಲ್ಲಿ ಇಬ್ಬರು ಯುವಕರು ಸೇರಿ ನಾಲ್ವರು ಮೃತಪಟ್ಟಿದ್ದಾರೆ. ರಸ್ತೆ ತಿರುವಿಗೆ ಅಳವಡಿಸಿರುವ ಸ್ಟೀಲ್ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದುಕೊಂಡು ಬೈಕ್ ಸವಾರ ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಬ್ಯಾಟರಾಯನಪುರ ನಿವಾಸಿ ಧನುಶಂಕರ್ (30) ಮೃತರು. ಬೆಳಗ್ಗೆ 8.30ರ ಸುಮಾರಿಗೆ ಧನುಶಂಕರ್ ತಮ್ಮ ಬೈಕ್‌ನಲ್ಲಿ ನೈಸ್ ರಸ್ತೆಯ ನಂದಿ ಲಿಂಕ್ಸ್ ಹತ್ತಿರ ಹೋಗುವಾಗ ರಸ್ತೆ ತಿರುವಿನ ಬದಿಯಲ್ಲಿ ಅಳವಡಿಸಿರುವ ಸ್ಟೀಲ್ ಬ್ಯಾರಿಕೇಡ್‌ಗೆ ನಿಯಂತ್ರಣ ಕಳೆದುಕೊಂಡು ಡಿಕ್ಕಿ ಹೊಡೆದುಕೊಂಡಿದ್ದು, ಪರಿಣಾಮ ಧನುಶಂಕರ್ ಎದೆ, ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು. ಪ್ರಕರಣ ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ 6.30ರ ಸುಮಾರಿಗೆ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕ ಆಯಾತಪ್ಪಿ ಬಿದ್ದು ಮೃತಪಟ್ಟಿದ್ದಾನೆ. ಲಗ್ಗೆರೆ ನಿವಾಸಿ ರಾಕೇಶ್ (25) ಮೃತ ಯುವಕ. ಮಂಡ್ಯ ಮೂಲದ ರಾಕೇಶ್ ಕೆಲ ತಿಂಗಳಿಂದ ಲಗ್ಗೆರೆಯಲ್ಲಿ ವಾಸವಾಗಿದ್ದು, ಅಡುಗೆ ಕೆಲಸ ಮಾಡಿಕೊಂಡಿದ್ದ. ಶುಕ್ರವಾರ ಸಂಜೆ 6.30ರ ಸುಮಾರಿಗೆ ಕಾರ್ಯನಿಮಿತ್ತ ಲಗ್ಗೆರೆಯಿಂದ ನಾಗರಬಾವಿ ಕಡೆ ಹೋಗುವಾಗ ಮೇಲುಸೇತುವೆ ಮೇಲೆ ಆಯಾತಪ್ಪಿ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಸಂಚಾರ ಪೊಲೀಸರು ಹೇಳಿದರು.
ಹೆಬ್ಬಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಹೋಗುತ್ತಿದ್ದ ಹಿಂಬದಿ ಸವಾರ ಮೃತಪಟ್ಟಿದ್ದಾನೆ. ಪ್ರೇಮ್ (27) ಮೃತ ಹಿಂಬದಿ ಸವಾರ. ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ವಿರೇಶ್ ಎಂಬವರು ಪರಿಚಯಸ್ಥ ಪ್ರೇಮ್ ಜತೆ ತಮ್ಮ ಬೈಕ್‌ನಲ್ಲಿ ಹೆಬ್ಬಾಳ ವರ್ತುಲ ರಸ್ತೆಯ ಬೆಥೆಲ್ ಚರ್ಚ್ ಸಮೀಪದ ಹೋಗುವಾಗ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ವಿರೇಶ್ ಬೈಕ್‌ಗೆ ಗುದ್ದಿದ್ದೆ. ಪರಿಣಾಮ ಹಿಂಬದಿ ಕುಳಿತಿದ್ದ ಪ್ರೇಮ್ ಕೆಳಗೆ ಬಿದ್ದು ತಲೆ, ಮುಖಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರಕರಣ ಹೆಬ್ಬಾಳ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.
ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ಕೆಂಗೇರಿ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಧುಸೂದನ್ (31) ಮೃತರು. ಶುಕ್ರವಾರ ಮುಂಜಾನೆ 6 ಗಂಟೆ ಸುಮಾರಿಗೆ ದುಬಾರಿಪಾಳ್ಯದಿಂದ ಕೆಂಗೇರಿ ಕಡೆ ಏಕಮುಖ ಸಂಚಾರದಲ್ಲಿ ವೇಗವಾಗಿ ಹೋಗುವಾಗ ನಿಯಂತ್ರಣ ಕಳೆದುಕೊಂಡ ಮಧುಸೂದನ್, ಮೈಸೂರ ರಸ್ತೆಯ ರಸ್ತೆ ವಿಭಜಕಕ್ಕೆ ಡಿಕ್ಕಿ ಮಾಡಿಕೊಂಡು ಮೃತಪಟ್ಟಿದ್ದಾರೆ. ಪ್ರಕರಣ ಕೆಂಗೇರಿ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.