ಬೆಂಗಳೂರು: ಇತ್ತೀಚೆಗೆ ಬಾರ್ ಆ್ಯಂಡ್ ರೆಸ್ಟೋರೆಂಟ್‌ವೊಂದಕ್ಕೆ ನುಗ್ಗಿ ಮಾರಕಾಸ್ತ್ರ ತೋರಿಸಿ ಹಣ ಸುಲಿಗೆ ಮಾಡಿದ್ದ ರೌಡಿಶೀಟರ್ ಸೇರಿ ನಾಲ್ವರನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ.
ನೆಲಮಂಗಲ ನಿವಾಸಿ ಇಮ್ರಾನ್ ಅಲಿಯಾಸ್ ಬೊಡ್ಚೆ(29), ಕೆ.ಜಿ. ಹಳ್ಳಿಯ ಮೋಹಿತ್ ಅಲಿಯಾಸ್ ಮೋಹನ್ (24), ಅರಾಫತ್ ಅಹಮದ್(25) ಹಾಗೂ ಸೈಯದ್ ಮಾಜ್ (23) ಬಂಧಿತರು.
ಆರೋಪಿಗಳಿಂದ 12,500 ರೂ. ನಗದು, ನಾಲ್ಕು ಬೈಕ್ ವಶಕ್ಕೆ ಪಡೆಯಲಾಗಿದೆ.
40 ಸಾವಿರ ರೂ. ಸುಲಿಗೆ: ಆರೋಪಿಗಳ ಪೈಕಿ ಇಮ್ರಾನ್ ಜೆ.ಸಿ.ನಗರ ಠಾಣೆ ರೌಡಿಶೀಟರ್ ಆಗಿದ್ದು, ಈತ ತನ್ನ ರೌಡಿಪಡೆ ಕಟ್ಟಿಕೊಂಡು ಠಾಣೆ ವ್ಯಾಪ್ತಿಯಲ್ಲಿ ನ.21ರ ರಾತ್ರಿ 11.55ಕ್ಕೆ ದಿನ್ನೂರು ಮುಖ್ಯ ರಸ್ತೆಯ ನೇಚರ್ ಬಾರ್ ಆ್ಯಂಡ್ ರೆಸ್ಟೋರೆಂಟ್ ನುಗ್ಗಿ ಕ್ಯಾಶಿ ಯರ್‌ಗೆ ಮಾರಕಾಸ್ತ್ರ ತೋರಿಸಿ 40 ಸಾವಿರ ರೂ. ಸುಲಿಗೆ ಮಾಡಿ ಪರಾರಿಯಾಗಿದ್ದರು.
10 ಪ್ರಕರಣ ಪತ್ತೆ: ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ, ಘಟನಾ ಸ್ಥಳದ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಂಧನದಿಂದ ಆರ್.ಟಿ. ನಗರ ಸೇರಿ ನಗರ, ಗ್ರಾಮಾಂತರ ಠಾಣೆ, ತಮಿಳುನಾಡಿನ ವಿವಿಧೆಡೆ ದಾಖ ಲಾಗಿದ್ದ 10 ಪ್ರಕರಣ ಪತ್ತೆಯಾಗಿವೆ. ಆರೋಪಿಗಳ ಪೈಕಿ ಇಮ್ರಾನ್ ವಿರುದ್ಧ ಪೀಣ್ಯ, ನೆಲಮಂಗಲ ಟೌನ್, ಗ್ರಾಮಾಂತರ, ಕಡೂರು, ಡಿ.ಜೆ.ಹಳ್ಳಿ. ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆ, ಕಾಟನ್ ಪೇಟೆ, ಕೆಂಗೇರಿ, ಕುಮಾರಸ್ವಾಮಿ ಲೇಔಟ್, ವಿದ್ಯಾರಣ್ಯ ಪುರ, ಯಲಹಂಕ ನ್ಯೂಟೌನ್ ಸಂಪಿಗೆಹಳ್ಳಿ, ಕೆಂಗೇರಿ, ಜೆ.ಸಿ.ನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಲಿಗೆ, ದರೋಡೆ, ಕೊಲೆಗೆ ಯತ್ನ, ಹಲ್ಲೆ, ದ್ವಿಚಕ್ರ ವಾಹನ ಕಳವು ಸೇರಿ 31ಕ್ಕೂ ಅಧಿಕ ಅಪರಾಧ ಪ್ರಕರಣಗಳು ದಾಖಲಾಗಿವೆ.
ಇನ್ನು ಆರೋಪಿ ಮೋಹಿತ್ ಹಲಸೂರು ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆರೋಪಿ ಅರಾಫತ್ ಅಹ ಮದ್ ಬಾಣಸವಾಡಿ, ಸೂರ್ಯನಗರ, ಹೆಣ್ಣೂರು, ಭಾರತಿನಗರ, ಪರಪ್ಪನ ಅಗ್ರಹಾರ, ಕೊಡಿಗೇಹಳ್ಳಿ, ಪುಲಿಕೇಶಿನಗರ, ಸದಾಶಿವನಗರ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಸುಲಿಗೆ ದರೋಡೆ, ಹಲ್ಲೆ, ದ್ವಿಚಕ್ರ ವಾಹನ ಕಳವು ಸೇರಿ 21ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.