ವಿಜಯಪುರ: ಜಿಲ್ಲೆಯಲ್ಲಿ ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಬಲೇಶ್ವರ ಗ್ರಾಮದ ಯಾಕೂಬ್ ಚಂದಪಾಶಾ ಕೋಲೂರ ನನ್ನು ಹತ್ಯೆ ಮಾಡಲಾಗಿತ್ತು.
ಹತ್ಯೆಗೆ ಸುಪಾರಿ ಕೊಟ್ಟ ಆರೋಪಿ ಪೈಗಂಬರ್ ರಾಜೇಸಾಬ ಕೋಲೂರ, 6 ಲಕ್ಷ ರೂ. ಸುಪಾರಿ ಪಡೆದು ಹತ್ಯೆ ಮಾಡಿದ ಆರೋಪಿಗಳಾದ ಬಬಲೇಶ್ವರ ಗ್ರಾಮದ ಪೈಗಂಬರ್ ದಸ್ತಗೀರ ಗೋಕಾಂವಿ, ಸಾರವಾಡ ಗ್ರಾಮದ ಚಂದ್ರಕಾಂತ ಅಶೋಕ ಪುನ್ನಣ್ಣವರ ಹಾಗೂ ಸಾಗರ ಹಣಮಂತ ಸಂಜೀವಗೋಳ ರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಪೈಗಂಬರ್ ರಾಜೇಸಾಬ ಕೋಲೂರ ಈತನ ಪತ್ನಿ ಜೊತೆ ಯಾಕೂಬ್ ಚಂದಪಾಶಾ ಕೋಲೂರ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಸಂಶಯ ಪಟ್ಟಿದ್ದ. ಇದೇ ವಿಚಾರವಾಗಿ ಹಲವು ಬಾರಿ ಎರಡೂ ಕುಟುಂಬಗಳ ಮಧ್ಯೆ ಜಗಳವೂ ನಡೆದಿದ್ದವು. ಈ ಹಂತದಲ್ಲೇ 2020 ಆಗಸ್ಟ್ 8 ರಂದು ಜಗಳ ನಡೆದ ಎರಡೇ ದಿನಗಳಲ್ಲಿ ಯಾಕೂಬ್ ಕಾಣೆಯಾಗಿದ್ದ.
ಹತ್ಯೆಗೆ ಸುಪಾರಿ ಪಡೆದ ಆರೋಪಿಗಳು ಯಾಕೂಬ್ ನನ್ನು ಕಾರಿನಲ್ಲಿ ಕರೆದೊಯ್ದು ಆ. 16 ರಂದು ವೈರ್ ನಿಂದ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿ, ಶವವನ್ನು ಕೋಲ್ಹಾರ ಬಳಿಯ ಕೃಷ್ಣಾ ನದಿ ಸೇತುವೆಗೆ ಎಸೆದು ಸಾಕ್ಷಿ ನಾಶಕ್ಕೆ ಮುಂದಾಗಿದ್ದರು ಎಂದು ಇದೀಗ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.
ಇದನ್ನೂ ಓದಿ:ಕಸಗೂಡಿಸುವ ವಿಚಾರಕ್ಕೆ ಜಗಳ: ಪತ್ನಿಯನ್ನು ಕೊಂದ ವೃದ್ಧ
ಬಬಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಲೇ ವಿಜಯಪುರ ಗ್ರಾಮೀಣ ವೃತದ ಸಿಪಿಐ ಎಸ್.ಬಿ.ಪಾಲಬಾವಿ, ತನಿಖೆ ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಹತ್ಯೆ ಕೃತ್ಯಕ್ಕೆ ಬಳಸಿದ ಕಾರು, ಸುಪಾರಿ ಹಣದಲ್ಲಿ ಖರೀದಿಸಿದ ಬೈಕ್, ಖರ್ಚು ಮಾಡಿಉಳಿದ 11,100 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ತನಿಖಾ ತಂಡಕ್ಕೆ ಶ್ಲಾಘನೀಯ ಪತ್ರ, ನಗದು ಬಹುಮಾನ ಘೋಷಿಸಿದ್ದಾಗಿ ಎಸ್ಪಿ ಅನುಪಮ್ ಅಗರವಾಲ ತಿಳಿಸಿದ್ದಾರೆ