ಕಾಬೂಲ್: ಹಕ್ಕಾನಿ ನೆಟ್ ವರ್ಕ್ ಭಯೋತ್ಪಾದನೆ ಸಂಘಟನೆಯ ರೂವಾರಿ ಜಲಾಲುದ್ದೀನ್ ಹಕ್ಕಾನಿ ದೀರ್ಘಕಾಲದ ಅನಾರೋಗ್ಯದಿಂದ ಸಾವನ್ನಪ್ಪಿರುವುದಾಗಿ ಅಫ್ಘಾನ್ ತಾಲಿಬಾನ್ ಮಂಗಳವಾರ ಘೋಷಿಸಿದೆ.
ಇದೀಗ ಉಗ್ರಗಾಮಿ ಸಂಘಟನೆ ಹಕ್ಕಾನಿ ನೆಟ್ ವರ್ಕ್ ಗೆ ಜಲಾಲುದ್ದೀನ್ ಪುತ್ರ ಸಿರಾಜುದ್ದೀನ್ ಹಕ್ಕಾನಿ ನೂತನ ಮುಖ್ಯಸ್ಥನನ್ನಾಗಿ ನೇಮಕ ಮಾಡಲಾಗಿದೆ. ಅಲ್ಲದೇ ಈತ ತಾಲಿಬಾನ್ ಉಗ್ರಸಂಘಟನೆಯ 2ನೇ ಮುಖಂಡ ಎಂದು ತಾಲಿಬಾನ್ ಪ್ರಕಟಣೆಯಲ್ಲಿ ತಿಳಿಸಿದೆ.
1980ರಲ್ಲಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಮತ್ತು ಪಾಕಿಸ್ತಾನದ ನೆರವಿನೊಂದಿಗೆ ರಷ್ಯಾದ ವಿರುದ್ಧದ ಹೋರಾಟದಲ್ಲಿ ಜಲಾಲುದ್ದೀನ್ ಹಕ್ಕಾನಿ ಮುಂಚೂಣಿಯಲ್ಲಿದ್ದ. ಈ ಸಂದರ್ಭದಲ್ಲಿ ಅಫ್ಘಾನ್ ಮುಜಾಹಿದೀನ್ ಕಮಾಂಡರ್ ಹಾಗೂ ಈತನ ಸಂಘಟನೆ ಅಮೆರಿಕದ ಸಿಐಎ ಗಮನ ಸೆಳೆದಿತ್ತು.
ಅರೆಬಿಕ್ ಭಾಷೆಯನ್ನು ನಿರರ್ಗಗಳವಾಗಿ ಮಾತನಾಡುತ್ತಿದ್ದ ಜಲಾಲುದ್ದೀನ್ ಅರಬ್ ಜಿಹಾದಿಗಳಾದ ಒಸಾಮಾ ಬಿನ್ ಲಾಡೆನ್ ಜೊತೆಯೂ ನಿಕಟ ಸಂಪರ್ಕ ಹೊಂದಿದ್ದ. 1995ರಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆ ಜೊತೆ ಹಕ್ಕಾನಿ ಕೈಜೋಡಿಸಿದ್ದ. ಸಮಕಾಲೀನ ಜಿಹಾದಿಗಳಲ್ಲಿ ಹಕ್ಕಾನಿ ಉನ್ನತ ವ್ಯಕ್ತಿತ್ವ ಹೊಂದಿದ್ದ ಎಂದು ತಾಲಿಬಾನ್ ಟ್ವೀಟರ್ ನಲ್ಲಿ ಹೊಗಳಿದೆ.
ಈ ಹಿಂದೆಯೂ ಹಲವು ಬಾರಿ ಹಕ್ಕಾನಿ ಸಾವನ್ನಪ್ಪಿರುವ ಸುದ್ದಿ ಹಬ್ಬಿತ್ತು. ಹಕ್ಕಾನಿ ಎಲ್ಲಿ ಸಾವನ್ನಪ್ಪಿದ್ದಾನೆ ಎಂಬ ಬಗ್ಗೆ ಖಚಿತವಾಗಿಲ್ಲ. ಸಾವಿನ ಸುದ್ದಿ ಬಗ್ಗೆ ತಾಲಿಬಾನ್ ಟ್ವೀಟ್ ಮಾಡಿರುವುದಾಗಿ ವರದಿ ತಿಳಿಸಿದೆ.