Advertisement

ಸಂಸದ ಗೋಪಾಲ್‌ ಶೆಟ್ಟಿ ಅವರ ಸಹಾಯ ಮರೆಯುವಂತಿಲ್ಲ : ಮುಂಡಪ್ಪ ಪಯ್ಯಡೆ

07:06 PM Dec 21, 2020 | Suhan S |

ಮುಂಬಯಿ, ಡಿ. 20: ಬಂಟರ ಸಂಘ ಮುಂಬಯಿ ಇದರ ನೂತನ ಶಿಕ್ಷಣ ಯೋಜನಾ ಸಮಿತಿಯ ಆಶ್ರಯದಲ್ಲಿ ಡಿ. 17ರಂದು ಬೆಳಗ್ಗೆ ಬೊರಿವಲಿ ಪಶ್ಚಿಮದ ಹೋಲಿಕ್ರಾಸ್‌ ರಸ್ತೆಯ ಐಸಿ ಕಾಲನಿಯಲ್ಲಿ ಸಂಘದ ನೂತನ ಅಂತಾರಾಷ್ಟ್ರೀಯ ಶಾಲಾ ಕಟ್ಟಡದ ಶಿಲಾನ್ಯಾಸ ಮತ್ತು ಭೂಮಿಪೂಜೆಯು ವಿದ್ವಾನ್‌ ಕೃಷ್ಣರಾಜ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ – ವಿಧಾನಗಳೊಂದಿಗೆ ನಡೆದು ಸಂಪನ್ನಗೊಂಡಿತು.

Advertisement

ಬಂಟರ ಸಂಘದ ನೂತ ಶಿಕ್ಷಣ ಯೋಜನೆಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ ಅವರು ಮಾತನಾಡಿ, ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅವರು ಸಂಘದ ಅಧ್ಯಕ್ಷರಾಗಿ ಪದವಿ ಸ್ವೀಕರಿಸಿದ ಸಂದರ್ಭದಲ್ಲಿ ಹೇಳಿದ ಮಾತಿನಂತೆ, ಮುಂಬಯಿಯ ಉಪನಗರದಲ್ಲೊಂದು ಅಂತಾರಾಷ್ಟ್ರೀಯ ಶಾಲೆ ಸ್ಥಾಪಿಸಬೇಕು ಎನ್ನುವ ಆಸೆ ಈಗ ಕೈಗೊಡಿ ಬಂದಿದೆ. ಹಲವಾರು ಕಡೆಗಳಲ್ಲಿ ಜಾಗದ ಅನ್ವೇಷಣೆ ನಡೆಸಿದ ಬಳಿಕ ಬೊರಿವಲಿಯ ಈ ಜಾಗವನ್ನು ಖರೀದಿಸಿ ಇಂದು ಭೂಮಿಪೂಜೆ ನಡೆಸಿ ಶಿಲಾನ್ಯಾಸ ಮಾಡಲಾಗಿದೆ. ಸಂಸದ ಗೋಪಾಲ್‌ ಸಿ. ಶೆಟ್ಟಿ ಅವರ ಸಲಹೆಯಂತೆ ಯೋಜನೆಯ ಕಾರ್ಯ ಸಿದ್ಧವಾಗುತ್ತಿದೆ. ಸಂಘ ಮತ್ತು ನೂತನ ಶಿಕ್ಷಣ ಸಮಿತಿಯು ಗೋಪಾಲ್‌ ಸಿ. ಶೆಟ್ಟಿ ಅವರ ಸೇವೆಯನ್ನು ಎಂದಿಗೂ ಮರೆಯುವಂತಿಲ್ಲ. ಯೋಜನೆಗೆ ಮೊದಲ ದೇಣಿಗೆ ನೀಡಿದ ವಿರಾರ್‌ ಶಂಕರ್‌ ಶೆಟ್ಟಿ, ಅವೆನ್ಯೂ ರಘುರಾಮ್‌ ಶೆಟ್ಟಿ, ಸಾಯಿ ಪ್ಯಾಲೇಸ್‌ ರವಿ ಎಸ್‌. ಶೆಟ್ಟಿ, ಸುಧಾಕರ್‌ ಎಸ್‌. ಹೆಗ್ಡೆ, ಕೆ. ಎಂ. ಶೆಟ್ಟಿ, ಪ್ರಶಾಂತ್‌ ಶೆಟ್ಟಿ, ಡಾ| ಪಿ. ವಿ. ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸ್ಮರಿಸುವುದು ನನ್ನ ಕರ್ತವ್ಯ. ಹಲವಾರು ದಾನಿಗಳು ಈಗಾಗಲೇ ನೂತನ ಯೋಜನೆಗೆ ಸಹಕಾರದ ಭರವಸೆ ನೀಡಿದ್ದಾರೆ. ಬಂಟ ಬಾಂಧವರೆಲ್ಲರೂ ತುಂಬು ಹೃದಯದ ಪ್ರೋತ್ಸಾಹ ನೀಡಲು ಮುಂದೆ ಬರಬಹುದು ಎಂಬ ಆಶಯ ವ್ಯಕ್ತಪಡಿಸಿದರು.

ಆ ಬಳಿಕ ಸಂಘದ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸಂಸದ ಗೋಪಾಲ್‌ ಸಿ. ಶೆಟ್ಟಿ, ಗೌರವ ಅತಿಥಿಗಳಾಗಿ ವಿಧಾನ ಪರಿಷತ್‌ ವಿಪಕ್ಷ ನಾಯಕ ಪ್ರವೀಣ್‌ ಧಾರೇಕರ್‌, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಉಪಸ್ಥಿತರಿದ್ದರು.

ಬೊರಿವಲಿ ಪೂರ್ವದ ಶಾಸಕ ಪ್ರಕಾಶ್‌ ಸುರ್ವೆ ಮಾತನಾಡಿ, ಬಂಟ ಸಮಾಜವು ಸರ್ವ ಸಮಾಜದವರನ್ನು ಒಂದುಗೂಡಿಸಿ ಶೈಕ್ಷಣಿಕ ಸೇವೆಗೆ ತೊಡಗಿರುವುದು ಅಭಿನಂದನೀಯ. ವಿದ್ಯಾದಾನಕ್ಕಿಂತ ಮಹಾದಾನ ಬೇರೊಂದಿಲ್ಲ. ಸರ್ವರೂ ತಮ್ಮ ಶಕ್ತಿಗನುಸಾರವಾಗಿ ದೇಣಿಗೆ ನೀಡಿ ಎಂದು ಕರೆ ನೀಡಿದರು.

ಇನ್ನೋರ್ವ ಅತಿಥಿ ವಿನೋದ್‌ ಗೋಸಾಲ್ಕರ್‌ ಮಾತನಾಡಿ, ಬೊರಿವಲಿಯ ಐಸಿ ಕಾಲನಿಯಲ್ಲಿ ಹೆಸರಾಂತ ಟ್ರಸ್ಟ್‌ ಗಳ ಅನೇಕ ಶಾಲೆಗಳಿವೆ. ಈಗ ಬಂಟರ ಸಂಘದ ಅಂತಾರಾಷ್ಟ್ರೀಯ ಶಾಲೆಯೊಂದು ಸೇರ್ಪಡೆಗೊಂಡಿರುವುದು ಅಭಿಮಾನದ ಸಂಗತಿ. ಈ ಯೋಜನೆ ಶೀಘ್ರದಲ್ಲೇ ಆರಂಭಗೊಳ್ಳಲೆಂದು ಹಾರೈಸಿದರು.

Advertisement

ಇದೇ ಸಂದರ್ಭದಲ್ಲಿ ಅತಿಥಿ-ಗಣ್ಯರನ್ನು, ದಾನಿಗಳನ್ನು ಸಂಘದ ಉಪಸಮಿತಿಗಳ ಕಾರ್ಯಾಧ್ಯಕ್ಷರು, ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಿದರು. ಆರ್ಕಿಟೆಕ್‌ ತರುಣ್‌ ಮೋಟಾ, ಜಾಗದ ಮೇಲ್ವಿಚಾರಕ ಶೈಲೇಶ್‌ ದೇಸಾಯಿ, ನ್ಯಾಯವಾದಿ ಪ್ರವೀಣ್‌ ಮೆಹ್ತಾ, ನೂತನ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ, ಉಪಾಧ್ಯಕ್ಷ ಎರ್ಮಾಳ್‌ ಹರೀಶ್‌ ಶೆಟ್ಟಿ, ಕಾರ್ಯದರ್ಶಿ ಜಯ ಎ. ಶೆಟ್ಟಿ, ಕೋಶಾಧಿಕಾರಿ ಸಿಎ ಹರೀಶ್‌ ಹೆಗ್ಡೆ ಅವರನ್ನು ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಸಂಸದ ಗೋಪಾಲ್‌ ಸಿ. ಶೆಟ್ಟಿ ಗೌರವಿಸಿದರು.

ಡಾ| ಪಿ. ವಿ. ಶೆಟ್ಟಿ, ರವಿ ಎಸ್‌. ಶೆಟ್ಟಿ, ಶಾಸಕರಾದ ಯೋಗೇಶ್‌ ಸಾಗರ್‌, ಎಂಎಲ್‌ಸಿ ವಿಜಯ್‌ ಬಾಯಿ ಗಿರ್ಕರ್‌, ವಿನೋದ್‌ ಗೋಸಾಲ್ಕರ್‌, ಶಿವ ಶೆಟ್ಟಿ, ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್‌ ಆರ್‌. ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್‌ ವಿ. ಶೆಟ್ಟಿ ನೂತನ ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಮುಂಡಪ್ಪ ಎಸ್‌. ಪಯ್ಯಡೆ, ಉಪ ಕಾರ್ಯಾಧ್ಯಕ್ಷ ಎರ್ಮಾಳ್‌ ಹರೀಶ್‌ ಶೆಟ್ಟಿ, ಕಾರ್ಯದರ್ಶಿ ಜಯ ಎ. ಶೆಟ್ಟಿ ಉಪಸ್ಥಿತರಿದ್ದರು.

ಆರಂಭದಲ್ಲಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಸಂಸದ ಗೋಪಾಲ್‌ ಸಿ. ಶೆಟ್ಟಿ, ಮುಖ್ಯ ಅತಿಥಿ ಪ್ರವೀಣ್‌ ದಾರೇಕರ್‌ ಅವರು ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶೈಲಜಾ ಎ. ಶೆಟ್ಟಿ ಪ್ರಾರ್ಥನೆಗೈದರು. ಸಮಿತಿಯ ಕಾರ್ಯದರ್ಶಿ ಜಯ ಎ. ಶೆಟ್ಟಿ ಮತ್ತು ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್‌ ರೈ ನಿರೂಪಿಸಿದರು.

ಇತ್ತೀಚೆಗೆ ನಿಧನ ಹೊಂದಿದ ಉದ್ಯಮಿ ಡಾ| ಆರ್‌. ಎನ್‌. ಶೆಟ್ಟಿ, ಸಂಘದ ಮಹಾದಾನಿಗಳಾದ ಅಣ್ಣಯ್ಯ ಶೆಟ್ಟಿ, ಜಯರಾಮ ಕೆ. ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಂಟರ ಸಂಘವು ಬೊರಿವಲಿ ಪಶ್ಚಿಮದಲ್ಲಿ ಆರಂಭಿಸುವ ಅಂತಾರಾಷ್ಟ್ರೀಯ ಶಾಲೆಯು ಹಿಂದೂ ಸಂಸ್ಕೃತಿಯ ಪ್ರತೀಕವಾಗಿ ರೂಪುಗೊಳ್ಳಲಿ. ಬಂಟರ ಸಮಾಜವು ಹೊಟೇಲ್‌ ಉದ್ಯಮದ ಜತೆಗೆ ಇತರ ಕ್ಷೇತ್ರಗಳಲ್ಲೂ ತಮ್ಮ ಪರಿಶ್ರಮದಿಂದ ಅಚಲ ಶ್ರದ್ಧೆ, ವಿಶ್ವಾಸದಿಂದ ಪ್ರಗತಿ ಹೊಂದಿದೆ. ಸಂಘದ ಶಾಲಾ ಯೋಜನೆಗೆ ಅಭಿನಂದನೆ ಹಾಗೂ ಸಂಪೂರ್ಣ ಸಹಕಾರ ನೀಡುತ್ತೇನೆ. ಮನಿಷಾ ತಾಯಿ, ದಹಿಸರ್‌ ಶಾಸಕಿ

ಕಾಲ ಬದಲಾಗಿದೆ. ಇದರ ಜತೆಗೆ ಶಿಕ್ಷಣದ ಬದಲಾವಣೆಯೂ ಅಗತ್ಯವಾಗಿದೆ. ಆಧುನಿಕ ಭಾರತವು ಶಿಕ್ಷಣದ ಬದಲಾವಣೆಯೊಂದಿಗೆ ಹೊಸ ದಿಶೆಯತ್ತ ಸಾಗುತ್ತಿದೆ. ಆಧುನಿಕ ಶಿಕ್ಷಣ ನೀತಿಗೆ ಸಂಪೂರ್ಣ ಸ್ವಾಗತ ನೀಡೋಣ. ಬಂಟರ ಸಂಘದ ಪ್ರತಿಯೊಂದು ಸಮಾಜಪರ ಕಾರ್ಯಗಳಿಗೆ ನನ್ನ, ಸಹಕಾರ, ಪ್ರೋತ್ಸಾಹ ಸದಾ ಇದೆ. ಈ ಶಿಕ್ಷಣ ಸಂಸ್ಥೆಯು ವಿಶ್ವಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯಲಿಸುನೀಲ್‌ ರಾಣೆ   ಬೊರಿವಲಿ ಪಶ್ಚಿಮದ ಶಾಸಕರು

 

ಚಿತ್ರ-ವರದಿ: ಪ್ರೇಮನಾಥ ಶೆಟ್ಟಿ ಮುಂಡ್ಕೂರು

 

Advertisement

Udayavani is now on Telegram. Click here to join our channel and stay updated with the latest news.

Next