ಬೆಂಗಳೂರು : ಕೋವಿಡ್ ನ ಮೂರನೇ ಅಲೆ ಎದುರಿಸಲು ಎಲ್ಲಾ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಆ ನಿಟ್ಟಿನಲ್ಲಿ ಈ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಕೇವಲ ಒಂದೇ ತಿಂಗಳ ಅವಧಿಯಲ್ಲಿ ಸುಸಜ್ಜಿತ ಆಸ್ಪತ್ರೆ ಸೋಂಕಿತರ ಚಿಕಿತ್ಸೆಗೆ ಸಿದ್ಧಗೊಳ್ಳಲಿದೆ ಎಂದು ಕಂದಾಯ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್ ಅಶೋಕ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ಭಾರತ ಸರ್ಕಾರ, ಅಮೆರಿಕನ್ ಇಂಡಿಯನ್ ಫೌಂಡೇಷನ್ ಮತ್ತು ವಿಶ್ವಸಂಸ್ಥೆಯ ಯು ಎನ್ ಡಿ ಪಿ ಅಡಿಯಲ್ಲಿ ಸುಮಾರು ರೂ.4 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮೇಕ್ ಶಿಫ್ಟ್ ಆಸ್ಪತ್ರೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು ,”ಈ ಆಸ್ಪತ್ರೆಯು 100 ಆಕ್ಸಿಜನ್ ಬೆಡ್, 20 ಐಸಿಯು, 10 ವೆಂಟಿಲೇಟರ್ ಹಾಗೂ 02 ಕೆ ಎಲ್ ಆಕ್ಸಿಜನ್ ಜನರೇಟರ್ ಸೇರಿದಂತೆ ಎಲ್ಲಾ ಸುಸಜ್ಜಿತ ವ್ಯವಸ್ಥೆಗಳನ್ನ ಹೊಂದಿರಲಿದೆ. ವಿನೂತನ ತಂತ್ರಜ್ಞಾನ ಬಳಸಿಕೊಂಡು ಈ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ಒಂದೇ ತಿಂಗಳಲ್ಲಿ ಆಸ್ಪತ್ರೆ ಸಕಲ ಸೌಲಭ್ಯಗಳೊಂದಿಗೆ ಸಿದ್ಧಗೊಳ್ಳಲಿದೆ”, ಎಂದು ತಿಳಿಸಿದರು.
ಇದನ್ನೂ ಓದಿ :ಜೂನ್ ಅಂತ್ಯದ ವರೆಗೆ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿ ಮೇಲೆ ಶೇ.5 ವಿನಾಯಿತಿ
“ಮೊದಲ ಹಾಗೂ ಎರಡನೇ ಅಲೆಯಲ್ಲಿ ಆದ ನ್ಯೂನತೆಗಳನ್ನ ಸರಿಪಡಿಸಿಕೊಂಡು ಮೂರನೇ ಅಲೆಗೆ ಎಲ್ಲ ಪೂರ್ವ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ಸಂದರ್ಭದಲ್ಲಿ ಇಂಥಹ ಆಸ್ಪತ್ರೆಗಳ ಅವಶ್ಯಕತೆಯಿದ್ದು, ಈ ಭಾಗದ ಜನರಿಗೆ ಈ ಆಸ್ಪತ್ರೆಯು ಸಂಜೀವಿನಿಯಾಗಲಿದೆ. ಆದಷ್ಟು ಬೇಗ ಈ ಆಸ್ಪತ್ರೆಯನ್ನ ಜನತೆಯ ಸೇವೆಗೆ ಸಿದ್ಧಗೊಳಿಸಲಾಗುವುದು”, ಎಂದರು.
ಈ ಕಾರ್ಯಕ್ರಮದಲ್ಲಿ ಸಂಸದರಾದ ಶ್ರೀ ಬಿ ಎನ್ ಬಚ್ಚೇಗೌಡ, ಶಾಸಕರಾದ ವೆಂಕಟರಮಣಯ್ಯ, ವಿಧಾನ ಪರಿಷತ್ ಸದಸ್ಯ ಎ ರವಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಮತ್ತಿತರರು ಪಾಲ್ಗೊಂಡಿದ್ದರು.