Advertisement

ಯುವ ದಿನಾಚರಣೆಗೆ ವೇದಿಕೆ ಸಜ್ಜು

12:33 AM Jan 12, 2020 | Team Udayavani |

ಬೆಂಗಳೂರು: ನಿಸರ್ಗ ಸೇವಾ ಫೌಂಡೇಷನ್‌ ಸಂಸ್ಥೆಯ ಸಂಸ್ಥಾಪಕಾಧ್ಯಕ್ಷ ಜಗದೀಶ್‌ ಅವರು ಹಲವಾರು ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಬರುತ್ತಿದ್ದು, ಸ್ವಾಮಿ ವಿವೇಕಾನಂದರ 158ನೇ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಶಾಲಾ ದಿನಗಳಲ್ಲಿಯೇ ಇವರಿಗೆ ಪರಿಸರದ ಬಗೆಗೆ ಕಾಳಜಿಯಿತ್ತು. ಹೀಗಾಗಿಯೇ ವಿದ್ಯಾರ್ಥಿ ಮಿತ್ರರು ಇವರನ್ನು ನಿಸರ್ಗ ಜಗದೀಶ್‌ ಎಂದು ಕರೆಯುತ್ತಿದ್ದರು. ಅದೀಗ ಖಾಯಂ ಹೆಸರಾಗಿದೆ.

Advertisement

ಕನ್ನಡ ಪ್ರೇಮಿಯಾಗಿರುವ ನಿಸರ್ಗ ಜಗದೀಶ್‌ ಅವರು, ಚಿಕ್ಕಂದಿನಿಂದಲೂ ಕನ್ನಡ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದಾರೆ. ಹಾಗೇ 7 ವರ್ಷಗಳಿಂದ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾರ್ಯಕ್ರಮ ಯಾವುದೇ ಇರಲಿ ಗಿಡ ನೆಡುವುದು, ಗಿಡಕ್ಕೆ ನೀರುಣಿಸುವುದು, ಗಿಡ ದಾನ ಮಾಡುವ ಮೂಲಕ ಅದನ್ನು ಉದ್ಘಾಟಿಸುವುದು ಇವರ ವಾಡಿಕೆಯಾಗಿದೆ. ಮಾವು, ಬೇವು, ಶ್ರೀಗಂಧ ಹೀಗೆ ವಿವಿಧ ಜಾತಿಯ 15 ಸಾವಿರಕ್ಕೂ ಅಧಿಕ ಗಿಡಗಳನ್ನು ನಗರಾದ್ಯಂತ ನೆಟ್ಟು ಪೋಷಿಸಿದ್ದಾರೆ. ಪರಿಸರ ರಕ್ಷಣೆ ಪೂಜೆ ಎಂದೇ ಭಾವಿಸಿದ್ದಾರೆ.

ಪರಿಸರ ಸಂರಕ್ಷಣೆಗೆಂದೇ ನಿಸರ್ಗ ಸೇವಾ ಫೌಂಡೇಶನ್‌ ಎಂಬ ಸೇವಾ ಸಂಸ್ಥೆ ಆರಂಭಿಸಿ ಪ್ರತಿವರ್ಷ ವಿಶ್ವ ಪರಿಸರ ದಿನಾಚರಣೆ, ವಿಶ್ವ ಭೂಮಿ ದಿನಾಚರಣೆ, ಜಲ ಸಂರಕ್ಷಣಾ ದಿನಾಚರಣೆ ಮುಂತಾದ ಕಾರ್ಯಕ್ರಮಗಳನ್ನು ಆಚರಿಸುತ್ತಾ ಬಂದಿದ್ದಾರೆ. ಪಟಾಕಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ನಿಸರ್ಗ ಜಗದೀಶ್‌ ಅವರು ನಡೆಸಿದ “ಪಟಾಕಿ ಬಿಟ್ಟಾಕಿ’ ಎಂಬ ಬೀದಿ ನಾಟಕಗಳ ಅಭಿಯಾನ ಸಾಕಷ್ಟು ಯಶಸ್ವಿಯಾಗಿದ್ದು, ಹೆಸರಾಂತ ಸಂಸ್ಥೆ ಬಿ.ಪ್ಯಾಕ್‌ ಕೂಡ ಇದಕ್ಕೆ ಸಹಕಾರ ನೀಡಿದೆ. ಗಣೇಶ ಹಬ್ಬದ ವೇಳೆ ಮಣ್ಣಿನ ಗಣಪತಿಯನ್ನು ವಿತರಿಸುವ ಮೂಲಕ ಜಲ, ಜಲಚರ ಉಳಿವಿಗೆ ಅಳಿಲು ಸೇವೆ ಸಲ್ಲಿಸುತ್ತಿದ್ದಾರೆ.

ಪ್ಲಾಸ್ಟಿಕ್‌ ಮುಕ್ತ ಬೆಂಗಳೂರಿಗಾಗಿ ಗಾಂಧಿ ಜಯಂತಿಯಂದು ಮಹಾಲಕ್ಷ್ಮೀ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಫ್ಲಾಗ್‌ ರನ್‌ ಕಾರ್ಯಕ್ರಮ ಆಯೋಜಿಸಿ ಬಿಬಿಎಂಪಿ ಗಿನ್ನಿಸ್‌ ದಾಖಲೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಆನ್‌ಲೈನ್‌ ಮೂಲಕ ಪಡಿತರ ಚೀಟಿ ನೋಂದಣಿ ಇದ್ದಾಗ ಉಚಿತವಾಗಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರಿಗೆ ಅವರ ಅಗತ್ಯದ ಎಪಿಎಲ್, ಬಿಪಿಎಲ್‌ ಕಾರ್ಡ್‌ಗಳು ದೊರೆಯುವಂತೆ ಮಾಡಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ವಿಮಾ ಯೋಜನೆಯ ಗುರುತಿನ ಚೀಟಿ ದೊರೆಯುವಂತೆ ಮಾಡಿದ್ದಾರೆ. ಇದರಿಂದ ನೂರಾರು ಫ‌ಲಾನುಭವಿ ಗಳಿಗೆ ಇವರಿಂದ ಉಪಯೋಗವಾಗಿದೆ. ಪ್ರತಿ ವರ್ಷ ಗಾಂಧಿಜಯಂತಿಯಂದು “ಸೇವಾದಿನವಾಗಿ’ ಆಚರಿಸುತ್ತಾ ಶ್ರಮದಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ.

ಕೆಂಪೇಗೌಡ ಪ್ರಶಸ್ತಿ ಪುರಸ್ಕೃತರು: ಪರಿಸರ ಹಾಗೂ ಸಮಾಜ ಸೇವೆಗೆ ಜಗದೀಶ್‌ ನೀಡಿರುವ ಕೊಡುಗೆ ಗಮನಿಸಿ, ಕಳೆದ ವರ್ಷ ಬಿಬಿಎಂಪಿ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಿದೆ. ವಿವಿಧ ಸಂಘ ಸಂಸ್ಥೆಗಳ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ಮಾಜಿ ಶಾಸಕ ನೆ.ಲ ನರೇಂದ್ರಬಾಬು ಅವರ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮ, ಹೋರಾಟ, ಚಳವಳಿಗಳಲ್ಲಿ ಭಾಗಿಯಾಗಿದ್ದಾರೆ.‌ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿಯ ನೆಚ್ಚಿನ ಸಿವಿಕ್‌ ಲೀಡರ್‌ ಆಗಿ ನಾಯಕತ್ವದ ಗುಣಗಳನ್ನು ರೂಢಿಸಿಕೊಂಡಿರುವುದು ಮಾತ್ರವಲ್ಲದೆ ಸಮಿತಿ ವತಿಯಿಂದ ಹಲವಾರು ಯಶಸ್ವಿ ಕಾರ್ಯಕ್ರಮ ಕೊಟ್ಟ ಕೀರ್ತಿ ಇವರ ಬೆನ್ನಿಗಿದೆ. ನಿಸರ್ಗ ಜಗದೀಶ್‌ ಕ್ಯಾಪ್ಟನ್‌ ಆಗಿರುವ ನಿಸರ್ಗ ಫೌಂಡೇಶನ್‌ ಹಾಗೂ ಮಹಾಲಕ್ಷ್ಮೀ ಎಜುಕೇಶನಲ್‌ ಟ್ರಸ್ಟ್‌ನ ಅಧ್ಯಕ್ಷರಾದ ಜಯರಾಮಣ್ಣ ಅವರು ವಿವೇಕಾನಂದರ ಜಯಂತಿಯಂದು ಆರೋಗ್ಯ ಶಿಬಿರ ಆಯೋಜಿಸಿರುವುದು ಶ್ಲಾಘನೀಯ.

Advertisement

ಆಟೋ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ: ಮಹಾಲಕ್ಷಿ ಲೇಔಟ್‌ ವಿಧಾನಸಭಾ ಕ್ಷೇತ್ರದಲ್ಲಿ ಜ. 12ರಂದು ಸ್ವಾಮಿ ವಿವೇಕಾನಂದರ 158ನೇ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲು ಸಿದ್ಧತೆ ನಡೆಸಿದ್ದು, ಸುಮಾರು 200 ಆಟೋ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ ಹಾಗೂ ಕಿಟ್‌ ವಿತರಿಸಲಿದ್ದಾರೆ. ನಿಸರ್ಗ ಫೌಂಡೇಶನ್‌ ಹಾಗೂ ಮಹಾಲಕ್ಷ್ಮೀ ಎಜುಕೇಶನ್‌ ಟ್ರಸ್ಟ್‌ಗಳ ಸಂಯುಕ್ತಾಶ್ರಯದಲ್ಲಿ ಕುರುಬರಹಳ್ಳಿ ವೃತ್ತದಲ್ಲಿ ಡಾ. ರಾಜ್‌ ಕುಮಾರ್‌ ಪುತ್ಥಳಿಯ ಮುಂಭಾಗದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಶಾಸಕ ಕೆ. ಗೋಪಾಲಯ್ಯ, ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಾಜಿ ಉಪ ಮೇಯರ್‌ ಹೇಮಲತಾ ಗೋಪಾಲಯ್ಯ, ಕಸಾಪದ ಕ್ಷೇತ್ರದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮುಖಂಡರಾದ ಎಂ.ನಾಗರಾಜ್‌ ಹಾಗೂ ಎಸ್‌.ಹರೀಶ್‌, ಜಯರಾಮಣ್ಣ ಉಪಸ್ಥಿತಿ ಇರಲಿದೆ. ಈ ಕಾರ್ಯಕ್ರಮದ ಯಶಸ್ಸಿಗಾಗಿ ಪಕ್ಷಾತೀತವಾಗಿ ಹಲವು ಮುಖಂಡರು ದುಡಿಯುತ್ತಿದ್ದಾರೆ. ಆದರೆ ಇಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರೆಂದರೆ ನಿಸರ್ಗ ಜಗದೀಶ್‌ ಅವರದ್ದು. ಏಕೆಂದರೆ ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದರಲ್ಲಿ ಇವರು ನಿಪುಣರು. ಕಳೆದ ಒಂದು ದಶಕದಿಂದಲೂ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಆಚರಿಸಿಕೊಂಡು ಬರುತ್ತಿದ್ದು ಕ್ಷೇತ್ರದ ಜನತೆಯ ಅಭಿಮಾನ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next