Advertisement

ಮಂಡೆಕೋಲು ಗ್ರಾಮದಲ್ಲಿ ನಲುವತ್ತಕ್ಕೂ ಅಧಿಕ ಸೈನಿಕರು!

09:19 PM Jan 25, 2020 | mahesh |

ಮಂಡೆಕೋಲು: ಗ್ರಾಮೀಣ ಪ್ರದೇಶವಾದ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದಿಂದ 40ಕ್ಕೂ ಅಧಿಕ ಮಂದಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಒಟ್ಟು 1,303 ಮನೆಗಳಿದ್ದು, 5,600 ಜನಸಂಖ್ಯೆ ಇದೆ. ವಾಯುಸೇನೆ, ಭೂಸೇನೆ, ಸಿಆರ್‌ಪಿಎಫ್, ಬಿಎಸ್ಸೆಫ್ ಮೊದಲಾದ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ನಿವೃತ್ತ ಯೋಧ ಚೆನ್ನಪ್ಪ ಅತ್ಯಾಡಿ ಅವರ ಇಬ್ಬರು ಪುತ್ರರೂ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Advertisement

ಇಂಡೋ- ಪಾಕ್‌ ಯುದ್ಧದಲ್ಲಿ ಭಾಗಿ
ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ ದೇರಣ್ಣ ಗೌಡ ಅಡ್ಡಂತಡ್ಕ 1965ರ ಭಾರತ- ಪಾಕಿಸ್ಥಾನ ಯುದ್ಧದಲ್ಲಿ ಭಾಗವಹಿಸಿದ್ದಾರೆ. 1962ರಲ್ಲಿ ಸೇನೆಗೆ ಸೇರಿದ ಸಂದರ್ಭ ಚೀನದೊಡನೆ ಯುದ್ಧ ನಡೆಯುತ್ತಿತ್ತು. ಪಂಜಾಬಿನ ಜಾಲಂಧರ್‌ ಹತ್ತಿರದ ಹೋಶಿಯಾರ್‌ಪುರ ಜಿಲ್ಲೆಯಲ್ಲಿ ಶಸ್ತ್ರಾಸ್ತ್ರ ನಿರ್ವಹಣ ವಿಭಾಗದಲ್ಲಿ 17 ದಿನ ಹಗಲು ರಾತ್ರಿ ಎನ್ನದೆ ದುಡಿದಿದ್ದಾರೆ.

2015ರ ಜೂ. 9ರಂದು ನಡೆದ ಮ್ಯಾನ್ಮಾರ್‌ ಬಾರ್ಡರ್‌ ಆಪರೇಷನ್‌ ತಂಡದಲ್ಲಿ ಮಂಡೆಕೋಲಿನ ರಘುಪತಿ ಉಗ್ರಾಣಿಮನೆ ಪಾಲ್ಗೊಂಡಿದ್ದರು. ನಾಗಾ ರಾಷ್ಟ್ರವಾದಿಗಳ ನೆಲೆಗಳ ಮೇಲಿನ ದಾಳಿಯಲ್ಲೂ ಪಾಲ್ಗೊಂಡಿದ್ದರು. 40 ನಿಮಿಷಗಳ ಕಾಲ ನಡೆದ ಈ ಕಾರ್ಯಾ ಚರಣೆಯಲ್ಲಿ 38 ನಾಗಾ ಬಂಡುಕೋರರನ್ನು ಹತ್ಯೆ ಮಾಡಲಾಗಿತ್ತು.

ದೇರಣ್ಣ ಗೌಡ ಅಡ್ಡಂತಡ್ಕ ಅಧ್ಯಕ್ಷ ರಾಗಿರುವ ಸುಳ್ಯದ ಮಾಜಿ ಸೈನಿಕರ ಸಂಘದ ಸದಸ್ಯರು ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯೋತ್ಸವ ದಿನ ಸುಳ್ಯ ಪ.ಪೂ. ಕಾಲೇಜಿನಲ್ಲಿ ನಡೆಯುವ ಪರೇಡ್‌ನ‌ಲ್ಲಿ ಸತತ 14 ವರ್ಷಗಳಿಂದ ಭಾಗವಹಿಸುತ್ತಿದ್ದಾರೆ.

1971ರ ಡಿ. 3ರ ಮಧ್ಯರಾತ್ರಿಯಲ್ಲಿ ಭಾರತ-ಪಾಕ್‌ ಯುದ್ಧ ಘೋಷಣೆಯಾದ ಸಂದರ್ಭ ಭೂಸೇನೆಯ ಚೆನ್ನಪ್ಪ ಅತ್ಯಾಡಿ ವೈರ್‌ಲೆಸ್‌ ಆಪರೇಟರ್‌ ಆಗಿದ್ದರು. 13 ದಿನಗಳ ಕಾಲ ನಡೆದ ಯುದ್ಧದಲ್ಲಿ ಅವರ ತೊಡೆಗೆ ಗುಂಡು ತಗಲಿತ್ತು. ಗಾಯ ಗೊಂಡಿದ್ದ ಸಂದರ್ಭದಲ್ಲಿ ಹುತಾತ್ಮನಾದೆ ಎಂಬ ಸಂದೇಶ ಮನೆಗೆ ರವಾನೆಯಾಗಿತ್ತು ಎಂದು ಚೆನ್ನಪ್ಪ ಅತ್ಯಾಡಿ ಸ್ಮರಿಸಿಕೊಳ್ಳುತ್ತಾರೆ. ಪಠಾಣ್‌ಕೋಟ್‌ ಆಸ್ಪತ್ರೆಯಿಂದ ದಿಲ್ಲಿಗೆ ತೆರಳಿ ಚಿಕಿತ್ಸೆ ಪಡೆದಿದ್ದರು.

Advertisement

ಮಂಡೆಕೋಲು ಭಾಗದಿಂದ ಸೈನಿಕರಾಗಿ ನಿವೃತ್ತರಾದವರು
ದೇರಣ್ಣ ಅಡ್ಡಂತಡ್ಕ, ಗುರುಪ್ರಸಾದ್‌ ರೈ ಪೇರಾಲ್‌ಗ‌ುತ್ತು, ಉತ್ತಪ್ಪ ಮುಂಡೋಡಿ, ಚೆನ್ನಪ್ಪ ಅತ್ಯಾಡಿ, ಉಮಾನಾಥ್‌ ಪೇರಾಲು, ಹರೀಶ ಸೊರಂಗ, ರಾಘವ ಆಲಂಕಳ್ಯ, ಕುಶಾಲಪ್ಪ ಗೌಡ ಕೆ., ಭರತ ಅತ್ಯಾಡಿ, ಉಮೇಶ ಬೊಳುಗಲ್ಲು, ಉದಯಕುಮಾರ ಕಣೆಮರಡ್ಕ, ಶೇಖರ ಮಣಿಯಾಣಿ, ಸುಭಾಶ್‌ ಸೊರಂಗ, ವಿಶ್ವನಾಥ ಚೌಟಾಜೆ, ರಿಷಿಕುಮಾರ ಪೇರಾಲುಗುತ್ತು, ರಘುಪತಿ ಉಗ್ರಾಣಿಮನೆ.

ಹಾಲಿ ಸೈನಿಕರಲ್ಲಿ ವಿನೋದ ಅತ್ಯಾಡಿ, ಜಗದೀಶ್‌ ಎಂ. ಮಂಡೆಕೋಲು, ಹರಿ ಪ್ರಸಾದ್‌ ಚೋಟಪಾಡಿ, ಗಿರೀಶ ಬಿ., ಹರೀಶ್‌ ಕೆ.ಟಿ., ರವೀಂದ್ರ ಯು.ಎಂ., ಹರಿಪ್ರಸಾದ್‌ ತೋಟಪ್ಪಾಡಿ, ಪವಿನ್‌ ರಾಜ್‌ ಕೆ.ಪಿ., ಹರಿಶ್ಚಂದ್ರ ಬಿ., ರಾಜೇಶ್‌, ರಾಘವ ಮಾವಂಜಿ ಪ್ರಮುಖರು.

ಹೆಮ್ಮೆ, ಸಂತೋಷ
ಒಂದು ಕಾಲಕ್ಕೆ ಕುಗ್ರಾಮವಾಗಿದ್ದ ಮಂಡೆಕೋಲು ಅತಿ ಹೆಚ್ಚು ಕೊಲೆ, ಸುಲಿಗೆ ನಡೆಯುತ್ತಿದ್ದ ಪ್ರದೇಶವೆಂಬ ಕುಖ್ಯಾತಿಗೂ ಒಳಗಾಗಿತ್ತು. ಶಿಕ್ಷಣದಮೂಲಕ ಪರಿಸ್ಥಿತಿ ಸುಧಾರಿಸಿತು. ದೇಶಪ್ರೇಮ ಮೂಡಿಸುವ ನಮ್ಮ ಪ್ರಯತ್ನ ಫ‌ಲ ನೀಡಿತು. ಈ ಭಾಗದಿಂದ ಹೆಚ್ಚು ಸಂಖ್ಯೆಯ ಸೈನಿಕರು ದೇಶಸೇವೆ ಮಾಡುತ್ತಿದ್ದಾರೆ.
– ದೇರಣ್ಣ ಗೌಡ, ಅಡ್ಡಂತಡ್ಕ, ಅಧ್ಯಕ್ಷ, ಮಾಜಿ ಸೈನಿಕರ ಸಂಘ, ಸುಳ್ಯ

ಶಿವಪ್ರಸಾದ್‌ ಮಣಿಯೂರು

Advertisement

Udayavani is now on Telegram. Click here to join our channel and stay updated with the latest news.

Next