Advertisement

ಕೋಟೆ ನಾಡಲ್ಲಿ ಬಂದ್‌ ವಿಫಲ

12:46 PM May 29, 2018 | |

ಚಿತ್ರದುರ್ಗ: ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ಸೋಮವಾರ ಕರೆ ನೀಡಲಾಗಿದ್ದ ಬಂದ್‌ ಜಿಲ್ಲೆಯಲ್ಲಿ ವಿಫಲವಾಗಿದೆ.

Advertisement

ಚಿತ್ರದುರ್ಗ ನಗರದಲ್ಲಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ನೇತೃತ್ವದಲ್ಲಿ ಬೆಳಿಗ್ಗೆ 7:30 ಗಂಟೆಯಿಂದ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದರು. 10:15 ಗಂಟೆ ತನಕ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಡಿಸಿದರು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಮುಖ್ಯ ರಸ್ತೆಯಾದ ಬಿ.ಡಿ. ರಸ್ತೆಯಲ್ಲಿ ಮಾತ್ರ ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 10:30 ಗಂಟೆ ತನಕ ಮುಚ್ಚಲಾಗಿತ್ತು. ನಂತರ ಎಂದಿನಂತೆ ಎಲ್ಲ ವಾಣಿಜ್ಯ ಅಂಗಡಿಗಳೂ ಬಾಗಿಲು ತೆರೆದವು. ಒಳ ರಸ್ತೆಗಳಲ್ಲಿನ ಹೋಟೆಲ್‌, ಅಂಗಡಿ, ಚಿತ್ರಮಂದಿರಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಆಟೋ, ಬಸ್‌, ಕಾರು, ಲಾರಿ ಮತ್ತಿತರ ವಾಹನಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಲಿಲ್ಲ. ಗಾಂಧಿ ವೃತ್ತದಿಂದ ಹೊಸ ನಗರಸಭೆಯ ಅಂಬೇಡ್ಕರ್‌ ವೃತ್ತದವರೆಗೆ ಪೊಲೀಸರೇ ರಸ್ತೆಗಳಲ್ಲಿ ಬ್ಯಾರಿಕೇಡ್‌ ಹಾಕಿದ್ದರು.

ನಗರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸಮೀಪ ಇರುವ ಹಾಗೂ ಯೂನಿಯನ್‌ ಪಾರ್ಕ್‌ನ ಇಂದಿರಾ ಕ್ಯಾಂಟೀನ್‌ಗಳ ಮೇಲೆ ಬಿಜೆಪಿ ಕಾರ್ಯಕರ್ತರು ಏಕಾಏಕಿ ಕಲ್ಲು ತೂರಾಟ ನಡೆಸಿದರು. ಇದರಿಂದ ಇಂದಿರಾ ಕ್ಯಾಂಟೀನ್‌ಗಳಿಗೆ ಅಳವಡಿಸಲಾಗಿದ್ದ ಗಾಜುಗಳು ಪುಡಿಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಶಂಭು, ಮಂಜು, ರವಿ ಎಂಬುವವರನ್ನು
ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬಸ್‌ ತಡೆದ ಶಾಸಕರು: ಬಿಜೆಪಿ ಮುಖಂಡರು ಬಂದ್‌ ಸ್ವಯಂಪ್ರೇರಿತ ಎಂದು ಹೇಳಿಕೆ ನೀಡಿದ್ದರೂ ಸ್ವತಃ ಶಾಸಕರೇ
ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ಬಸ್‌ ತಡೆದು ಪ್ರಶ್ನಿಸಿದ ಘಟನೆಯೂ ನಡೆಯಿತು. ಸಾರಿಗೆ ಬಸ್‌ ನಿಲ್ದಾಣದಿಂದ ಗಾಂಧಿ
ವೃತ್ತಕ್ಕೆ ಬಸ್‌ ಆಗಮಿಸುತ್ತಿದ್ದಂತೆ ಮೊದಲು ಕಾರ್ಯಕರ್ತರು ಬಸ್‌ ತಡೆದು ಚಾಲಕನನ್ನು ಪ್ರಶ್ನಿಸತೊಡಗಿದರು. ಅಲ್ಲಿಯೇ ಇದ್ದ ಶಾಸಕ ತಿಪ್ಪಾರೆಡ್ಡಿ ಬಸ್‌ ಬಳಿ ಆಗಮಿಸಿ ಬಸ್‌ ನಿಲ್ಲಿಸುವಂತೆ ಸೂಚಿಸಿದರು. ಅಲ್ಲದೆ ಈ ಮಾರ್ಗದಲ್ಲಿ ಬರಕೂಡದು ಎಂದು ತಾಕೀತು ಮಾಡಿದರು.

Advertisement

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳು, ಬ್ಯಾಂಕುಗಳು, ಪೆಟ್ರೋಲ್‌ ಬಂಕ್‌ಗಳು, ಶಾಲಾ- ಕಾಲೇಜುಗಳು ತೆರೆದಿದ್ದವು. ಔಷಧ ಅಂಗಡಿಗಳು, ಆಸ್ಪತ್ರೆಗಳು ತೆರೆದಿದ್ದವು. ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌, ಆಟೋ, ವಾಹನಗಳು ಸಂಚರಿಸಿದವು. ರಸ್ತೆ ಬದಿ, ತಳ್ಳುಗಾಡಿಗಳಲ್ಲಿ ಹಣ್ಣು, ಹೂವು, ತರಕಾರಿ ವ್ಯಾಪಾರ ಎಂದಿನಂತೆ ನಡೆಯಿತು. ಪ್ರತಿ ಸೋಮವಾರ ಜಿಲ್ಲಾ ಕೇಂದ್ರದಲ್ಲಿ ಸಂತೆ ನಡೆಯುತ್ತದೆ. ಬಂದ್‌ನಿಂದ ಸಂತೆಗೆ ಯಾವುದೇ ರೀತಿಯ ಅಡಚಣೆ ಉಂಟಾಗಲಿಲ್ಲ.

ಬೆಳಿಗ್ಗೆ 7:30ರಿಂದ ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟಗಳನ್ನು ಹಿಡಿದು ಗಾಂಧಿ ವೃತ್ತಕ್ಕೆ ಆಗಮಿಸಿದರು. ಆ
ಭಾಗದಲ್ಲಿನ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿಸಿದರು. ಕೆಲ ಹೋಟೆಲ್‌ಗ‌ಳು, ಕಾಫಿ-ಚಹಾ ಅಂಗಡಿಗಳು ಮುಚ್ಚಿದ್ದವು. ಇದರಿಂದ ಪ್ರವಾಸಿಗರು, ಸಾರ್ವಜನಿಕರು ತೊಂದರೆ ಅನುಭವಿಸಿದರು. ಪ್ರಮುಖ ರಸ್ತೆಗಳ ಪುಟ್‌ಪಾತ್‌ ಮೇಲಿನ ಅಂಗಡಿ ಮುಂಗಟ್ಟುಗಳು ನಿರಾತಂಕವಾಗಿ ವ್ಯಾಪಾರ ವಹಿವಾಟು ನಡೆಸಿದರು. ಕೆಲವು ಅಂಗಡಿಕಾರರು ಅರ್ಧ ಬಾಗಿಲು ತೆರೆದುಕೊಂಡು ವ್ಯಾಪಾರ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next