ಅಜೆಕಾರು: ವರಂಗ ಪಂ. ವ್ಯಾಪ್ತಿಯ ಮುನಿಯಾಲಿನ ಗಾಂಧಿ ಮೈದಾನವನ್ನು ಅಭಿವೃದ್ಧಿಗೊಳಿಸಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಬಗ್ಗೆ ಚಿಂತನೆ ನಡೆಸಲಾಗಿದ್ದು ಮುಂದಿನ ದಿನಗಳಲ್ಲಿ ಸೂಕ್ತ ರೂಪುರೇಷೆಯೊಂದಿಗೆ ಕಾರ್ಯಗತಗೊಳಿಸಲಾಗುವುದು ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಅವರು ಮುನಿಯಾಲು ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಮತದಾರರಿಗೆ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವರಂಗ ಪಂಚಾಯತ್ ವ್ಯಾಪ್ತಿ ಸೇರಿದಂತೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ದಾಖಲೆಯ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯ ನಡೆಸಲಾಗಿದ್ದು ಅಭಿವೃದ್ಧಿ ಕಾರ್ಯಗಳಿಗೆ ಮೆಚ್ಚಿ ಕ್ಷೇತ್ರದ ಮತದಾರರು ದಾಖಲೆಯ ಅಂತರದಲ್ಲಿ ಮತದಾನ ಮಾಡಿ ಪುನರಾಯ್ಕೆಗೊಳಿಸಿದ್ದಾರೆ. ಮತದಾರರು ಇಟ್ಟಿರುವ ನಂಬಿಕೆಗೆ ಚ್ಯುತಿ ಬಾರದಂತೆ ಮುಂದಿನ ದಿನಗಳಲ್ಲಿ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದರು.
ಮುನಿಯಾಲಿನಲ್ಲಿ ವಾಕಿಂಗ್ ಟ್ರ್ಯಾಕ್, ಈಜು ಕೊಳ ಹಾಗೂ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದರು.
ವರಂಗ ಗ್ರಾಮ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಅಂಡಾರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಬಿಜೆಪಿ ಮುಖಂಡರಾದ ಉದ್ಯಮಿ ದಿನೇಶ್ ಪೈ ಪ್ರಸ್ತಾವನೆಗೈದರು.
ಎಪಿಎಂಸಿ ಅಧ್ಯಕ್ಷ ಮುಟ್ಲುಪಾಡಿ ಸತೀಶ್ ಶೆಟ್ಟಿ, ಜಿ. ಪಂ. ಸದಸ್ಯೆ ಜ್ಯೋತಿ ಹರೀಶ್, ತಾ.ಪಂ. ಸದಸ್ಯೆ ಸುಲತಾ, ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀಧರ ಪೈ, ಹಿರಿಯ ಪದ್ಮನಾಭ ಪೈ, ಮೂಡುಕುಡೂರು ಬೀಡು ವಿಜಯ ಭಂಗ, ಆನಂದ ಪೂಜಾರಿ ಕಾಡುಹೊಳೆ, ವರಂಗ ಗ್ರಾ.ಪಂ. ಅಧ್ಯಕ್ಷ ಸುರೇಂದ್ರ ಶೆಟ್ಟಿ, ತಾ. ಪಂ. ಸದಸ್ಯ ರಮೇಶ್ ಕುಮಾರ್, ಉದ್ಯಮಿ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಸಮೃದ್ಧಿ ಪ್ರಕಾಶ್ ಶೆಟ್ಟಿ ಸ್ವಾಗತಿಸಿ, ಕಾರ್ಕಳ ತಾ| ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರಮೀಳಾ ಹರೀಶ್ ವಂದಿಸಿ, ಗ್ರಾ.ಪಂ. ಸದಸ್ಯ ರತ್ನಾಕರ ಪೂಜಾರಿ ನಿರೂಪಿಸಿದರು.