ಬೆಂಗಳೂರು: ರಾಜ್ಯದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆಚುಕ್ಕೆ ರೋಗದ ಬಗ್ಗೆ ಅಧ್ಯಯನ ನಡೆಸಿ, ಪರಿಹಾರ ಕಂಡುಕೊಳ್ಳಲು, ಕೇಂದ್ರ ಸರಕಾರದ ಏಳು ಮಂದಿ ತಜ್ಞರನ್ನು ಒಳಗೊಂಡ ತಜ್ನರ ನೇಮಕಾತಿ ನಿರ್ಧಾರವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಾಗತಿಸಿದ್ದಾರೆ.
ಈ ಬಗ್ಗೆ, ಮಾಧ್ಯಮಗಳ ಜತೆ ಮಾತನಾಡಿರುವ ಸಚಿವರು, ಮಲೆನಾಡು ಹಾಗೂ ಕರಾವಳಿ ಭಾಗದ ರೈತರು ಎದುರಿಸುತ್ತಿರುವ ಸಂಕಷ್ಟಕ್ಕೆ, ಕೇಂದ್ರ ಸರಕಾರ, ತಕ್ಷಣ ಸ್ಪಂದಿಸಿದ್ದು, ಅಡಿಕೆ ಬೆಳೆಗೆ ಎದುರಾಗಿರುವ ರೋಗ ನಿವಾರಣೆಗೆ ಸಮಿತಿ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿ ಎಂದು ಹಾರೈಸಿದ್ದಾರೆ.
ಕಳೆದ ವಾರವಷ್ಟೇ, ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾದ ಎಲೆ ಚುಕ್ಕೆ ರೋಗಕ್ಕೆ ಪರಿಹಾರ ಬಯಸಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನವರ ನೇತೃತ್ವದಲ್ಲಿ, ಕೇಂದ್ರ ಕೃಷಿ ಸಚಿವ ನರೆಂದ್ರ ಸಿಂಗ್ ತೋಮರ್ ಅವರನ್ನು ದೆಹಲಿಯಲ್ಲಿ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿದ್ದು, ಕೇಂದ್ರ ಸರಕಾರ ಸಮಸ್ಯೆಯ ಪರಿಹಾರಕ್ಕೆ ಕ್ಷಿಪ್ರ ಗತಿಯಲ್ಲಿ ಸ್ಪಂದಿಸಿ ಸಮಿತಿ ರಚಿಸಿದೆ ಎಂದರು.
ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಪ್ರದೇಶದ ಅಡಿಕೆ ತೋಟಗಳು ಎಲೆ ಚುಕ್ಕೆ ರೋಗಕ್ಕೆ ಬಲಿಯಾಗಿದ್ದು, ಕಾಳ್ಗಿಚ್ಚಿನಂತೆ ಇತರೆಡೆ ಹರಡುತ್ತಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.
ಸರಿಸುಮಾರು ಐವತ್ತು ಲಕ್ಷ ಜನರಿಗೆ, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಜೀವನೋಯ ಕಲ್ಪಿಸಿಕೊಟ್ಟಿರುವ, ಅಡಿಕೆ ಬೆಳೆ, ನಮ್ಮ ಭಾಗದ ರೈತರ ಆರ್ಥಿಕ ಜೀವನಾಡಿಯಾಗಿದೆ, ಎಂದು ಹೇಳಿದ್ದಾರೆ.