ಯಾದಗಿರಿ: ಕಾಲುವೆ ಕಾಮಗಾರಿ ಆದಾಗಿನಿಂದ ಹಲವು ವರ್ಷಗಳಿಂದ ನೋಡುವವರೇ ಇಲ್ಲ. ಇದೀಗ ಕಾಲುವೆಗಳು ಹಾಳಾಗಿವೆ, ಹುಲ್ಲು ಬೆಳೆದು ಮುಚ್ಚಿವೆ. ಹೂಳು ತುಂಬಿ ಕಾಲುವೆ ನೀರು ಹರಿಯದಂತಾಗಿವೆ. ಇಂತಹ ಹೂಳು ತುಂಬಿದ ಕಾಲುವ್ಯಾಗ ನೀರು ಹೆಂಗ್ ಹರಿತಾದ ಹೇಳ್ರೀ? ಎಂದು ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಕೆಬಿಜೆಎನ್ನೆಲ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ರೈತರಿಂದ ನೀರಿನ ಬಗ್ಗೆ ಹಲವು ದೂರುಗಳು ಬಂದ ಹಿನ್ನೆಲ್ಲೆ ಶಾಸಕರು ಮಂಗಳವಾರ ದಿಢೀರ್ ಖಾನಾಪುರ ಕ್ಯಾಂಪಿನ ಉಪ ವಿಭಾಗ ಕಚೇರಿ ಭೇಟಿ ನೀಡಿದರು. ಬಳಿಕ ಶಾಸಕರು ಹಾಗೂ ಕೆಬಿಜೆಎನ್ನೆಲ್ ಅಧಿಕಾರಿಗಳ ಸಂಗಡ ಖಾನಾಪುರ, ಕುರುಕುಂದ, ಮಳ್ಳಳ್ಳಿ, ನಾಯ್ಕಲ್ ಮೂಲಕ ಹಾದು ಹೋಗುವ ಕಾಲುವೆ ವೀಕ್ಷಿಸಿ ಪರಿಶೀಲಿಸಿದರು. ಆಗ ಶಾಸಕರು ತುಂಬಿದ ಹೂಳು, ಬೆಳೆದ ಹುಲ್ಲು, ನಿಂತಿರುವ ನೀರು ಕಂಡು ನೀರು ಇದರಲ್ಲಿ ಹರಿಯುವುದಾದರೂ ಹೇಗೆ? ಎಂದು ಅಧಿಕಾರಿಗಳ ಮೇಲೆ ಕಿಡಿ ಕಾರಿದರು.
ರೈತರ ಸಮಸ್ಯೆ ಕೂಲಂಕಷವಾಗಿ ಆಲಿಸಿದ ಶಾಸಕ ಮುದ್ನಾಳ ಬಳಿಕ ಕೆಬಿಜೆಎನ್ನೆಲ್ ಉಪ ವಿಭಾಗ ಇಇ ಸುಭಾಷ ಚವ್ಹಾಣ ಇತರೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಚೀಫ್ ಎಂಜಿನಿಯರ್ ಅವರನ್ನು ಮೊಬೈಲ್‌ನಲ್ಲಿ ಸಂಪಕಿಸಿ ರೈತರ ಸಮಸ್ಯೆ ತಿಳಿಸಿ, ಕೂಡಲೇ ಕಾಲುವೆಯಲ್ಲಿ ಸ್ವತ್ಛತೆ ಕೈಗೊಂಡು ರೈತರಿಗೆ ಸರಿಯಾಗಿ ನೀರು ತಲುಪುವಂತೆ ವ್ಯವಸ್ಥೆ ಮಾಡಿಕೊಡಬೇಕು. ಖಾನಾಪುರ ಡಿಸ್ಟ್ರಿಬ್ಯೂಟರ್‌ನಲ್ಲಿ ಗೇಜ್ ಪ್ರಕಾರ 1.7 ಪ್ರಮಾಣ ನೀರು ಬೀಡಬೇಕು. ಆದರೆ ಸ್ಥಳೀಯ ಅಧಿಕಾರಿಗಳು ಕೇವಲ 1.2 ಗೇಜ್ ಪ್ರಮಾಣದಲ್ಲಿ ಮಾತ್ರ ನೀರು ಹರಿಸುತ್ತಾರೆ. ಇದರಿಂದ ಕಾಲುವೆ ಅಂಚಿನ ರೈತರಿಗೆ ಸಮರ್ಪಕ ನೀರು ಸಿಗದೇ ವಂಚಿತರಾಗಿದ್ದಾರೆ ಎಂದು ಸಿಇ ಗಮನಕ್ಕೆ ತಂದರು.
ಇದನ್ನೂ ಓದಿ: ಕಾಪು ಪುರಸಭೆ ವ್ಯಾಪ್ತಿಯಲ್ಲಿ ಎಲ್‌ಇಡಿ ಲೈಟ್ ಅಳವಡಿಕೆಗೆ ಪ್ರಾಯೋಗಿಕ ಚಾಲನೆ
ತಕ್ಷಣ ಈ ಬಗ್ಗೆ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚಿಸುವುದಾಗಿ ಶಾಸಕರಿಗೆ ಭರವಸೆ ನೀಡಿದರು. ಬಳಿಕ ಅಧಿಕಾರಿಗಳು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ಶಾಸಕರಿಗೆ ಭರವಸೆ ನೀಡಿದರು. ಕೆಬಿಜೆಎನ್ನೆಲ್‌ನ ಖಾನಾಪುರ ವಿಭಾಗದ ಇಇ ಸುಭಾಷ ಚವ್ಹಾಣ, ಎಇಇ ಹುಸನಪ್ಪ ಕಟ್ಟಿಮನಿ, ಜೆಇ ಪಿಬಿ ಹಿರೇಮಠ, ಎಪಿಎಂಸಿ ತಾಲೂಕು ಅಧ್ಯಕ್ಷ ಈರಣ್ಣ ಸಾಹು ತಡಿಬಿಡಿ, ತಾಪಂ ಮಾಜಿ ಸದಸ್ಯ ಪರಶುರಾಮ ಕುರುಕುಂದಿ, ಚನ್ನಾರಡ್ಡಿಗೌಡ ಮದರಕಲ್, ಬಸರಡ್ಡಿಗೌಡ ವನಸಾನಿ, ದೇವಿಂದ್ರಪ್ಪ ಕವಲಿ, ಭೀಮರಡ್ಡಿಗೌಡ ಚಟ್ನಳ್ಳಿ, ಬಸವರಾಜಪ್ಪ ಸಾಹುಕಾರ ಕುರುಕುಂದಾ, ಬಸವರಾಜಪ್ಪ ಸಾಹು ಆವಂಟಿ, ಬಸ್ಸಣಗೌಡ ಕುರುಕುಂದಿ, ಗೋವಿಂದಪ್ಪ ಕೊಂಚೆಟ್ಟಿ, ಮರಿಲಿಂಗಪ್ಪ ಕೊಂಚೆಟ್ಟಿ, ರಂಗಪ್ಪ ಖಾನಾಪುರ, ಸಿದ್ದಲಿಂಗಪ್ಪ ಮಳ್ಳಳ್ಳಿ, ಚನ್ನಯ್ಯಸ್ವಾಮಿ ಹಿರೇಮಠ, ಚಟ್ನಳ್ಳಿ ರೈತರು ಇದ್ದರು.
ಶಾಸಕರೆದುರು ಗೋಳು ತೋಡಿಕೊಂಡ ರೈತರು
ಕೆಬಿಜೆಎನ್ನೆಲ್ ಕಾಲುವೆಗಳಿಗೆ ಹನಿ ನೀರು ಹರಿಯುವುದಿಲ್ಲ. ಪ್ರತಿ ವರ್ಷ ಇದೇ ಸಮಸ್ಯೆಯಾಗುತ್ತದೆ. ಇದೀಗ ಕಾಲುವೆ ನೀರು ನಂಬಿ ಸುಮಾರು 12000 ಕ್ವಿಂಟಲ್ ಶೇಂಗಾ ಬಿತ್ತನೆ ಮಾಡಿದ್ದೇವೆ. ಇದೀಗ ಬಿತ್ತನೆ ಮಾಡಿದ ಬೆಳೆಗಳಿಗೆ ನೀರಿನ ಅವಶ್ಯವಾಗಿದೆ ಎಂದು ಚಟ್ನಳ್ಳಿ ಗ್ರಾಮದ ನೂರಾರು ರೈತರು ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಮುಂದೆ ಗೋಳು ತೋಡಿಕೊಂಡರು. ವಾರಾಬಂದಿ ನ.10ರ ತನಕ ರದ್ದುಗೊಳಿಸಿ ಹಗಲು-ರಾತ್ರಿ ನೀರು ಹರಿಸುವಂತೆ ಶಾಸಕರ ಮುಂದೆ ರೈತರು ಪಟ್ಟು ಹಿಡಿದರು. ನೀರಾವರಿ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.