ನವದೆಹಲಿ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪರಾಜಯಗೊಂಡಿದ್ದ ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ ದೆಹಲಿಯ ಲ್ಯುಟೈಯೆನ್ಸ್ ನ 28 ತುಘಲಕ್ ಕ್ರೆಸೆಂಟ್ ನಲ್ಲಿರುವ ಅಧಿಕೃತ ಬಂಗಲೆಯನ್ನು ಖಾಲಿ ಮಾಡಿರುವುದಾಗಿ ಗುರುವಾರ (ಜುಲೈ12) ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶದ ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡ ಕಿಶೋರಿ ಲಾಲ್ ಶರ್ಮಾ ಅವರು ಬಿಜೆಪಿ ಸ್ಮೃತಿ ಇರಾನಿ ಅವರನ್ನು 1.5 ಲಕ್ಷಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದರು. ಈ ಹಿನ್ನೆಲೆಯಲ್ಲಿ ಇರಾನಿ ಕಳೆದ ವಾರ ತಮ್ಮ ಅಫೀಶಿಯಲ್ ಬಂಗಲೆಯನ್ನು ಖಾಲಿ ಮಾಡಿರುವುದಾಗಿ ವರದಿ ವಿವರಿಸಿದೆ.
2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಅಮೇಠಿಯಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಪರಾಜಯಗೊಳಿಸಿದ್ದರು.
ಮಾಜಿ ಸಚಿವರು ಹಾಗೂ ಮಾಜಿ ಸಂಸದರು ನಿಯಮದ ಪ್ರಕಾರ ನೂತನ ಸರ್ಕಾರ ಸರ್ಕಾರ ರಚನೆಯಾದ ಒಂದು ತಿಂಗಳೊಳಗೆ ತಮಗೆ ನೀಡಿರುವ ಸರ್ಕಾರಿ ಬಂಗಲೆಯನ್ನು ತೆರವುಗೊಳಿಸಬೇಕು.