Advertisement

ಸರ್ಕಾರಿ ಗೌರವಗಳೊಂದಿಗೆ ಜಾಫ‌ರ್‌ ಅಂತ್ಯ ಸಂಸ್ಕಾರ

06:00 AM Nov 27, 2018 | Team Udayavani |

ಬೆಂಗಳೂರು: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಸಿ.ಕೆ. ಜಾಫ‌ರ್‌ ಷರೀಫ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನೆರವೇರಿತು.

Advertisement

ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ನಿಧನ ಹೊಂದಿದ್ದ ಜಾಫ‌ರ್‌ ಷರೀಫ್ ಅವರನ್ನು ಬೆಂಗಳೂರಿನ ನಂದಿದುರ್ಗ ರಸ್ತೆಯಲ್ಲಿರುವ ಖುದ್ದೂಸ್‌ ಸಾಹೇಬ್‌ “ಖಬರಸ್ತಾನ’ (ಸ್ಮಶಾನ)ದಲ್ಲಿ ಇಸ್ಲಾಂ ಧರ್ಮದ ಸಂಪ್ರದಾಯದಂತೆ “ದಫ‌ನ್‌’ (ಸಮಾಧಿ) ಮಾಡಲಾಯಿತು.

ಜಾಫ‌ರ್‌ ಷರೀಫ್ ಅವರ ಬಯಕೆಯಂತೆ ಖುದ್ದೂಸ್‌ ಸಾಹೇಬ್‌ ಖಬರಸ್ತಾನದಲ್ಲಿ ಅವರಿಗಾಗಿ ಮೊದಲೇ ಮೀಸಲಿಟ್ಟಿದ್ದ ಜಾಗದಲ್ಲಿ ಸಮಾಧಿ (ದಫ‌ನ್‌) ಮಾಡಲಾಯಿತು. ಇದೇ ಜಾಗದಲ್ಲಿ ಅವರ ಪತ್ನಿ, ಇಬ್ಬರು ಪುತ್ರರ ಸಮಾಧಿ ಇದೆ. ಈ ವೇಳೆ ಅವರ ಮೊಮ್ಮಕ್ಕಳಾದ ವಹಾಬ್‌ ಷರೀಫ್, ರಹ್ಮಾನ್‌ ಷರೀಫ್, ಅಳಿಯ ಹಾಗೂ ಮಾಜಿ ಶಾಸಕ ಸೈಯದ್‌ ಯಾಸೀನ್‌, ಕುಟುಂಬದ ಸದಸ್ಯರು, ಸಮುದಾಯದ ಮುಖಂಡರು, ರಾಜಕೀಯ ನಾಯಕರು ಹಾಗೂ ಷರೀಫ್ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಸರ್ಕಾರದಿಂದ ಗೌರವ ಸಲ್ಲಿಸಿದ ಬಳಿಕ ಖುದ್ದೂಸ್‌ ಸಾಹೇಬ್‌ ಈದ್ಗಾ ಮೈದಾನದಲ್ಲಿ ಜನಾಝಾ ನಮಾಜ್‌ ನೆರವೇರಿಸಲಾಯಿತು. ಕರ್ನಾಟಕ ರಾಜ್ಯದ ಅಮಿರೆ ಶರಿಯತ್‌ ಮೌಲಾನ ಸಗೀರ್‌ ಅಹ್ಮದ್‌ ರಶಾದಿ ಜನಾಝಾ ನಮಾಜ್‌ನ ನೇತೃತ್ವವಹಿಸಿದ್ದರು. ಜುಮ್ಮಾ ಮಸೀದಿಯ ಇಮಾಮ್‌ ಮತ್ತು ಖತೀಬ್‌ ಮೌಲಾನ ಖಾದರ್‌ ಷಾ ವಾಜಿದ್‌ ಪ್ರಾರ್ಥನೆ ಸಲ್ಲಿಸಿದರು.

ಬೆಳಗ್ಗೆ ಷರೀಫ್ ಅವರ ನಿವಾಸಕ್ಕೆ ಭೇಟಿ ನೀಡಿದ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌, ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

Advertisement

ಸರ್ಕಾರದಿಂದ ಗೌರವ
ಮಧ್ಯಾಹ್ನ 12 ಗಂಟೆಗೆ ಕೋಲ್ಸ್‌ಪಾರ್ಕ್‌ನಲ್ಲಿರುವ ಜಾಫ‌ರ್‌ ಷರೀಫ್ ಅವರ ನಿವಾಸದಿಂದ ಪಾರ್ಥಿವ ಶರೀರವನ್ನು ಕೆಪಿಸಿಸಿ ಕಚೇರಿಗೆ ತರಲಾಯಿತು. ಅಲ್ಲಿ ಪಕ್ಷದ ವತಿಯಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅಂತಿಮ ನಮನ ಸಲ್ಲಿಸಿದರು. ಮಧ್ಯಾಹ್ನ 12.30ಕ್ಕೆ ಪಾರ್ಥಿವ ಶರೀರವನ್ನು ಬೆನ್ಸನ್‌ಟೌನ್‌ನಲ್ಲಿರುವ ಖುದ್ದೂಸ್‌ ಸಾಹೇಬ್‌ ಈದ್ಗಾ ಮೈದಾನಕ್ಕೆ ತರಲಾಯಿತು. ಅಲ್ಲಿ ಪೊಲೀಸ್‌ ತಂಡದಿಂದ ಮೂರು ಸುತ್ತು ಕುಶಾಲು ತೋಪು ಹಾರಿಸಲಾಯಿತು. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರದ ಪರವಾಗಿ ಗೌರವ ಸಲ್ಲಿಸಿದರು.

ಈ ವೇಳೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಮಾಜಿ ರಾಜ್ಯಸಭಾ ಸದಸ್ಯ ಕೆ. ರೆಹಮಾನ್‌ ಖಾನ್‌, ರಾಜ್ಯಸಭಾ ಸದಸ್ಯ ನಾಸೀರ್‌ ಹುಸೇನ್‌, ಸಚಿವರಾದ ಜಮೀರ್‌ ಅಹ್ಮದ್‌ ಖಾನ್‌, ಯು.ಟಿ. ಖಾದರ್‌, ಶಾಸಕ ಭೈರತಿ ಸುರೇಶ್‌, ಮಾಜಿ ಸಚಿವರಾದ ರೋಷನ್‌ಬೇಗ್‌, ಎಸ್‌.ಆರ್‌. ಪಾಟೀಲ್‌, ವಿಧಾನಪರಿಷತ್‌ ಸದಸ್ಯರಾದ ಸಿ.ಎಂ ಇಬ್ರಾಹಿಂ, ಯು.ಬಿ. ವೆಂಕಟೇಶ್‌, ನಸೀರ್‌ ಅಹ್ಮದ್‌, ರಿಜ್ವಾನ್‌ ಅರ್ಷದ್‌ ಮತ್ತಿತರರು ಇದ್ದರು.

“ನನ್ನ ಮತ್ತು ಜಾಫ‌ರ್‌ ಷರೀಫ್ ಅವರ ರಾಜಕೀಯ ಒಡನಾಟ 40 ವರ್ಷದ್ದು. ದೇಶ, ಪಕ್ಷ ಮತ್ತು ಸಮುದಾಯಕ್ಕೆ ಅವರು ಕೊಟ್ಟ ಕೊಡುಗೆ ಮರೆಯುವಂತಿಲ್ಲ. ಅನೇಕ ಸಂದರ್ಭಗಳಲ್ಲಿ, ಹಲವಾರು ವಿಚಾರಗಳಲ್ಲಿ ಇಬ್ಬರು ಸೇರಿ ತೀರ್ಮಾನ ತೆಗೆದುಕೊಂಡಿದ್ದೆವು.
– ಗುಲಾಂ ನಬಿ ಆಜಾದ್‌, ರಾಜ್ಯಸಭೆ ಪ್ರತಿಪಕ್ಷ ನಾಯಕ

ಜಾಫ‌ರ್‌ ಷರೀಫ್ ಅವರೊಂದಿಗೆ ನನ್ನದು 50 ವರ್ಷದ ಒಡನಾಟ. ಅವರೊಬ್ಬ ಕಾಂಗ್ರೆಸ್‌ನ ಹಿರಿಯ ನಾಯಕರು. ಇಂದಿರಾಗಾಂಧಿ, ಎಸ್‌.ನಿಜಲಿಂಗಪ್ಪ, ಸೋನಿಯಾ ಗಾಂಧಿಯವರಿಗೆ ಬಹಳ ಆತ್ಮೀಯರಾಗಿದ್ದರು. ಅವರ ಸಂಪಾದಕತ್ವದ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಸದ್ಯದಲ್ಲೇ ನಡೆಸಲು ಚಿಂತಿಸಿದ್ದ ಅವರು ನನ್ನನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಆದರೆ ಈ ರೀತಿ ಅವರನ್ನು ನೋಡುವ ಕಲ್ಪನೆ ಇರಲಿಲ್ಲ.
– ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದೀಯ ನಾಯಕ

“ಜಾಫ‌ರ್‌ ಷರೀಫ್ ಅವರು ದೇಶದಲ್ಲಿ ರೈಲ್ವೆ ಯೋಜನೆಗಳಿಗೆ ಭದ್ರ ಅಡಿಪಾಯ ಹಾಕಿದವರು. ಅವರ ನಿಧನದಿಂದ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ನಷ್ಟವಾಗಿದೆ. ಉತ್ತಮ ರಾಜಕಾರಣಿಯನ್ನು ಕಳೆದುಕೊಂಡಂತಾಗಿದೆ. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾಗಾಂಧಿ ಅವರ ಕುಟುಂಬದೊಂದಿಗೆ ಆತ್ಮೀಯ ನಂಟು ಹೊಂದಿದ್ದರು. ಷರೀಫ್ ಅವರ ನಿಧನಕ್ಕೆ ಸೋನಿಯಾಗಾಂಧಿ ಅವರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ’.
– ಕೆ.ಸಿ. ವೇಣುಗೋಪಾಲ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

“ಜಾಫ‌ರ್‌ ಷರೀಫ್ ಒಬ್ಬ ಒಳ್ಳೆಯ ಹಾಗೂ ನಿಷ್ಠುರವಾದಿ ರಾಜಕಾರಣಿಯಾಗಿದ್ದರು. ಸಾಮಾನ್ಯ ಕುಟುಂಬದಿಂದ ಬಂದು ಬಹಳ ಎತ್ತರಕ್ಕೆ ಏರಿದವರು. ಅವರ ಅಗಲಿಕೆ ಬಹಳ ನೋವು ತಂದಿದೆ’.
– ಎಚ್‌. ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

ಜಾಫ‌ರ್‌ ಷರೀಫ್ ಅವರು ಒಬ್ಬ ನಿಷ್ಠುರ ರಾಜಕಾರಣಿಯಾಗಿದ್ದರು. ಎಸ್‌.ಎಂ.ಕೃಷ್ಣ ಅವರ ಸರ್ಕಾರ ಮಾತ್ರವಲ್ಲದೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲೂ ತಪ್ಪುಗಳನ್ನು ಎತ್ತಿ ತೋರಿದ್ದರು. ಅವರ ಅಗಲಿಕೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ.
-ಕೆ.ಬಿ. ಕೋಳಿವಾಡ, ಮಾಜಿ ಸ್ಪೀಕರ್‌

“ಜಾಫ‌ರ್‌ ಷರೀಫ್ ಅವರ ನಿಧನದಿಂದಾಗಿ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ, ಇಡೀ ದೇಶಕ್ಕೆ ನಷ್ಟವಾಗಿದೆ. ಅವರು ದೇಶದೆಲ್ಲೆಡೆ ಅಲ್ಪಸಂಖ್ಯಾತರ ಪರವಾದ ಧ್ವನಿಯಾಗಿದ್ದರು. ಆದರೆ, ಇಂದು ಆ ಧ್ವನಿ ನಮೊ¾ಂದಿಗಿಲ್ಲ. ಇಂತಹ ನಾಯಕರು ಸಮುದಾಯದ ಸೇವೆಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬರಲಿ.
– ನಸೀರ್‌ಅಹ್ಮದ್‌, ವಿಧಾನಪರಿಷತ್‌ ಸದಸ್ಯ

ಸಮುದಾಯದ ಸೇವೆಗಾಗಿ ಇಡೀ ಜೀವನ ಮೀಸಲಿಟ್ಟಿದ್ದ ಜಾಫ‌ರ್‌ ಷರೀಫ್ ಅವರು ಸಂಸದರಾಗಿ, ಕೇಂದ್ರ ಸಚಿವರಾಗಿ ರಾಜ್ಯ ಹಾಗೂ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಸೇವೆಗಳು ಸದಾ ಸ್ಮರಣೀಯವಾಗಿರುತ್ತದೆ. ಅವರ ನೆನಪಿನಲ್ಲಿ ಯಾವುದಾದರೂ ಒಂದು ಯೋಜನೆ ಜಾರಿಗೆ ತರುವಂತೆ ಸರ್ಕಾರದ ಜೊತೆ ಚರ್ಚೆ ಮಾಡಲಾಗುವುದು.
– ಡಾ.ಕೆ.ರೆಹಮಾನ್‌ ಖಾನ್‌, ಕೇಂದ್ರದ ಮಾಜಿ ಸಚಿವ

ಸಮುದಾಯಕ್ಕೆ ಸೇವೆ ಸಲ್ಲಿಸಿದವರ ಹೆಸರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಜಾಫ‌ರ್‌ ಷರೀಫ್ ಅವರ ಹೆಸರನ್ನು ರಾಜ್ಯದಲ್ಲಿ ಚಿರಸ್ಥಾಯಿಗೊಳಿಸಲು ಒಂದು ವಿಶೇಷವಾದ ಕಾರ್ಯಕ್ರಮ ಅಥವಾ ಯೋಜನೆಯನ್ನು ಜಾರಿಗೆ ತರುವಂತೆ ರಾಜ್ಯ ಸರ್ಕಾರ ಹಾಗೂ ವಿಶೇಷವಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಮನವಿ ಮಾಡುತ್ತೇನೆ.
– ಸಿ.ಎಂ. ಇಬ್ರಾಹಿಂ, ವಿಧಾನಪರಿಷತ್‌ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next