Advertisement

ಡಿ.ಎಂ.ಕೆ. ನಾಯಕ ; ತ.ನಾಡು ಮಾಜೀ ಮುಖ್ಯಮಂತ್ರಿ ಕರುಣಾನಿಧಿ ಇನ್ನಿಲ್ಲ

06:53 PM Aug 07, 2018 | Karthik A |

ಚೆನ್ನೈ : ತಮಿಳುನಾಡಿನ ಮಾಜೀ ಮುಖ್ಯಮಂತ್ರಿ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (DMK) ಪಕ್ಷದ ಪರಮೋಚ್ಛ ನೇತಾರ ಮುತ್ತುವೇಲ್ ಕರುಣಾನಿಧಿ ಅವರು ಮಂಗಳವಾರ ಸಾಯಂಕಾಲ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಅವರು ಮೂವರು ಪತ್ನಿಯರು ಮತ್ತು ಎಂ.ಕೆ. ಸ್ಟಾಲಿನ್, ಅಳಗಿರಿ, ಕನ್ನಿಮೋಳಿ ಸೇರಿದಂತೆ ಆರು ಮಕ್ಕಳನ್ನು ಅಗಲಿದ್ದಾರೆ.

Advertisement

ವಯೋಸಹಜ ಅನಾರೋಗ್ಯದ ಕಾರಣದಿಂದ ಕರುಣಾನಿಧಿ ಅವರನ್ನು ಕೆಲ ದಿನಗಳ ಹಿಂದೆಯಷ್ಟೇ ನಗರದ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮತ್ತು ಕಳೆದ ಆದಿತ್ಯವಾರದಿಂದ ಅವರ ಆರೋಗ್ಯ ಹದಗೆಡುತ್ತಾ ಬಂದಿತ್ತು. ಇಂದು ಅವರ ಪ್ರಮುಖ ಅಂಗಗಳ ಕಾರ್ಯಕ್ಷಮತೆ ಕ್ಷೀಣವಾಗುತ್ತಾ ಬರುತ್ತಿದ್ದಂತೆಯೇ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ತಜ್ಞ ವೈದ್ಯರ ತಂಡವು ಕರುಣಾನಿಧಿ ಅವರ ಆರೋಗ್ಯ ಚೇತರಿಕೆಗೆ ಸಂಬಂಧಿಸಿದಂತೆ ಕಳವಳವನ್ನು ವ್ಯಕ್ತಪಡಿಸಿತ್ತು. ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಕುರಿತಾದಂತೆ ಕ್ಷಣಕ್ಷಣದ ಮಾಹಿತಿಯನ್ನು ನೀಡಲಾಗುತ್ತಿತ್ತು.

ಆದರೆ ಮಂಗಳವಾರ ಸಾಯಂಕಾಲದ ಹೊತ್ತಿಗೆ ಅವರ ಆರೋಗ್ಯ ಸ್ಥಿತಿ ಸಂಪೂರ್ಣವಾಗಿ ಹದಗೆಡಲಾರಂಭಿಸಿತು ಮತ್ತು ಸುಮಾರು 6.15ರ ಹೊತ್ತಿಗೆ ತಮಿಳುನಾಡಿನ ರಾಜಕೀಯ ರಂಗದಲ್ಲಿ ಅಚ್ಚಳಿಯದ ಛಾಪನ್ನು ಮೂಡಿಸಿದ್ದ ಮತ್ತು ದ್ರಾವಿಡ ಸ್ವಾಭಿಮಾನಿ ಹೋರಾಟದ ಮುಂಚೂಣಿ ನಾಯಕರಲ್ಲಿ ಒಬ್ಬರಾಗಿದ್ದ ಮುತ್ತುವೇಲ್ ಕರುಣಾನಿಧಿ ಅವರು ನಿಧನರಾಗಿದ್ದಾರೆಂಬ ಸುದ್ದಿ ಬರಸಿಡಿಲಿನಂತೆ ಎರಗಿತ್ತು.


ಕರುಣಾನಿಧಿ ನಿಧನಕ್ಕೆ ಗಣ್ಯರ ಸಂತಾಪ

ಎಂ.ಕರುಣಾನಿಧಿ ಅವರ ನಿಧನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಮಾನಾಥ ಕೋವಿಂದ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಮಾಜೀ ಪ್ರಧಾನಿ ದೇವೇಗೌಡ, ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಕರ್ನಾಟಕ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ವಿವಿಧ ರಾಜಕೀಯ ಮತ್ತು ಸಿನೇಮಾ ಕ್ಷೇತ್ರದ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

ದ್ರಾವಿಡ ಸ್ವಾಭಿಮಾನಿ ಹೋರಾಟಗಾರನ ಹೆಜ್ಜೆಗುರುತುಗಳು…

Advertisement

– 1924ನೇ ಇಸವಿ ಜೂನ್ 3ರಂದು ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ತಿರುಕುವಲೈ ಎಂಬಲ್ಲಿ ಜನನ

– 1947ರಲ್ಲಿ ಚಿತ್ರಕಥಾ ಬರಹಗಾರನಾಗಿ ತಮಿಳು ಚಿತ್ರರಂಗ ಪ್ರವೇಶ. ಕರುಣಾನಿಧಿ ಚಿತ್ರಕಥೆ ಬರೆದ ಮೊದಲ ಚಿತ್ರ ‘ರಾಜಕುಮಾರಿ’. ಎಂ.ಜಿ. ರಾಮಚಂದ್ರನ್ ನಾಯಕ.

– ಕರುಣಾನಿಧಿ ಅವರ ಹೋರಾಟ ಮನೋಭಾವಕ್ಕೆ ಸೂಕ್ತವೆನ್ನುವಂತೆ ಅವರ ಚಿತ್ರಕಥೆಯಲ್ಲಿ ಮೂಡಿಬಂದ ಹೆಸರಾಂತ ಚಿತ್ರ ‘ಪರಾಶಕ್ತಿ’. ಶಿವಾಜಿ ಗಣೇಶನ್ ಮತ್ತು ಎಸ್.ಎಸ್. ರಾಜೇಂದ್ರನ್ ಮುಖ್ಯ ಭೂಮಿಕೆಯಲ್ಲಿದ್ದ ಚಿತ್ರ ಬಾಕ್ಸ್ ಆಫೀಸಿನಲ್ಲಿ ಸಾಕಷ್ಟು ಸದ್ದು ಮಾಡಿತ್ತು ಮತ್ತು ಈ ಚಿತ್ರ ಸಂಪ್ರದಾಯವಾದಿಗಳ ಕೆಂಗಣ್ಣಿಗೂ ಗುರಿಯಾಗಿತ್ತು.

-2011ನೇ ಇಸವಿಯವರೆಗೆ ಚಿತ್ರಕಥೆ ರಚನೆಯಲ್ಲಿ ಸಕ್ರಿಯರಾಗಿದ್ದ ಕರುಣಾನಿಧಿ ಚಿತ್ರಕಥೆ ಬರೆದ ಕೊನೆಯ ಚಿತ್ರ ಪೊನ್ನಾರ್ ಶಂಕರ್

– ಚಿತ್ರಸಾಹಿತಿ ಮಾತ್ರವಲ್ಲದೇ ಕರುಣಾನಿಧಿಯವರು ತಮಿಳು ಸಾಹಿತ್ಯ ಕ್ಷೇತ್ರಕ್ಕೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕವನಗಳು, ಪತ್ರಗಳು, ಕಾದಂಬರಿಗಳು, ಆತ್ಮಕಥೆಗಳು, ಐತಿಹಾಸಿಕ ಕಾದಂಬರಿಗಳು, ನಾಟಕಗಳು ಮತ್ತು ಚಿತ್ರಗೀತೆಗಳನ್ನೂ ಸಹ ಕರುಣಾನಿಧಿಯವರು ತಮ್ಮ ಬದುಕಿನುದ್ದಕ್ಕೂ ರಚಿಸುತ್ತಾ ಬಂದಿದ್ದಾರೆ.

– 1949ರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಮೂಲಕ ಸಕ್ರಿಯ ರಾಜಕೀಯ ರಂಗಕ್ಕೆ ಪ್ರವೇಶ.

– ಐದು ಬಾರಿ ತಮಿಳಿನಾಡಿನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಣೆ.

– ಹತ್ತುಬಾರಿ ಡಿ.ಎಂ.ಕೆ. ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಖ್ಯಾತಿ ಕರುಣಾನಿಧಿಯವರದ್ದು.

Advertisement

Udayavani is now on Telegram. Click here to join our channel and stay updated with the latest news.

Next