ಕೊಲಂಬೊ: ಶ್ರೀಲಂಕಾದ ಮಾಜಿ ಆರಂಭಕಾರ ತರಂಗ ಪರಣವಿತನ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. 32 ಟೆಸ್ಟ್‌ಗಳನ್ನಾಡಿದ್ದ ಅವರು 32.58ರ ಸರಾಸರಿಯಲ್ಲಿ 1,792 ರನ್ ಪೇರಿಸಿದ್ದಾರೆ.
ಎಡಗೈ ಆಟಗಾರನಾಗಿದ್ದ ಪರಣವಿತನ 2007-08ರ ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ತಂಡಕ್ಕೆ ಕರೆ ಪಡೆದಿದ್ದರು. ಅಂದು ಸಿಂಹಳೀಸ್ ನ್ಪೋರ್ಟ್ಸ್ ಕ್ಲಬ್ ಚಾಂಪಿಯನ್ ಆಗುವಲ್ಲಿ ಪರಣವಿತನ ಪಾತ್ರ ಅಮೋಘವಾಗಿತ್ತು. ಅವರು ಒಂದು ದ್ವಿಶತಕ ಸಹಿತ 893 ರನ್ ಪೇರಿಸಿದ್ದರು.
2009ರ ಪಾಕಿಸ್ಥಾನ ಪ್ರವಾಸಕ್ಕಾಗಿ ಪರಣವಿತನ ಮೊದಲ ಸಲ ಶ್ರೀಲಂಕಾ ತಂಡದಲ್ಲಿ ಕಾಣಿಸಿಕೊಂಡರು. ಕರಾಚಿಯ ಮೊದಲ ಪಂದ್ಯದಲ್ಲೇ ಟೆಸ್ಟ್ ಕ್ಯಾಪ್ ಧರಿಸಿದರು. ಅಂದು ಲಾಹೋರ್‌ನಲ್ಲಿ ನಡೆದ ತಂಡದ ಬಸ್ ಮೇಲಿನ ದಾಳಿಯಲ್ಲಿ ಗಾಯಾಳಾದವರಲ್ಲಿ ಪರಣವಿತನ ಕೂಡ ಒಬ್ಬರಾಗಿದ್ದರು. ಚೇತರಸಿಕೊಂಡ ಅವರು 2010ರಲ್ಲಿ ಪ್ರವಾಸಿ ಭಾರತದೆದುರಿನ ತವರಿನ ಟೆಸ್ಟ್ ಸರಣಿಯಲ್ಲಿ ಸತತ 2 ಶತಕ ಬಾರಿಸಿ ಮಿಂಚಿದರು.
ಮುಂದಿನ ದಿನಗಳಲ್ಲಿ ಅಷ್ಟೇನೂ ಯಶಸ್ಸು ಕಾಣದ ಪರಣವಿತನ 2012ರಲ್ಲಿ ದಿಮುತ್ ಕರುಣಾರತ್ನೆ ಅವರಿಗೆ ಜಾಗ ಬಿಟ್ಟುಕೊಟ್ಟು ಟೆಸ್ಟ್ ತಂಡದಿಂದ ಬೇರ್ಪಟ್ಟರು.