ಮೈಸೂರು: ಮಾಜಿ ಸೈನಿಕರಿಗಾಗಿ ಹುಣಸೂರಿನಲ್ಲಿ ಕಾಯ್ದಿರಿಸಿರುವ ಉಳಿಕೆ ಜಮೀನು ಹಂಚಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸತ್ಯ ಎಂ.ಎ.ಎಸ್ ಫೌಂಡೇಶನ್ ನೇತೃತ್ವದಲ್ಲಿ ಮಾಜಿ ಸೈನಿಕರು ಕುಟುಂಬ ಸಮೇತ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಹಾಲಿ ಹಾಗೂ ಮಾಜಿ ಸೈನಿಕರಿಗೆ ತಲಾ 10 ಎಕರೆ ಭೂಮಿಯನ್ನು ನ್ಯಾಯಯುತವಾಗಿ ಮಂಜೂರು ಮಾಡುವಂತೆ ಒತ್ತಾಯಿಸಿ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
1952 ರಲ್ಲಿ 5000ಎಕರೆ ಭೂಮಿಯನ್ನು ಖರೀದಿಸಿದ ರಾಜ್ಯಸರ್ಕಾರ, 2 ನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಸುಮಾರು 350 ಸೈನಿಕ ಕುಟುಂಬಗಳಿಗೆ ತಲಾ ಹತ್ತು ಎಕರೆಯಂತೆ ಮಂಜೂರು ಮಾಡಿತ್ತು. ಆದರೆ, ಹುಣಸೂರು ತಾಲೂಕಿನ ರತ್ನಪುರಿ ಒಂದು ಮತ್ತು ಎರಡನೇ ಸೈನಿಕರ ಕಾಲೋನಿಯಲ್ಲಿ ತಲಾ 8 ಎಕರೆಯಂತೆ 284 ಸೈನಿಕ ಕುಟುಂಬಗಳಿಗೆ ಭೂಮಿ ಹಂಚಿಕೆ ಮಾಡಲಾಗಿದೆ. ಉಳಿಕೆ ಎರಡು ಎಕರೆ ಭೂಮಿ ಹಾಗೂ ಉಳಿದ 66 ಮಂದಿ ಮಾಜಿ ಸೈನಿಕರಿಗೆ ಇಂದಿಗೂ ಜಮೀನು ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿದರು.
ಉದ್ಯೋಗ-ಭೂಮಿ ನೀಡಿ: ಮಾಜಿ ಸೈನಿಕರಿಗೆ ಮೀಸಲಿರಿಸಿದ್ದ ಕೆಲವು ಜಮೀನನ್ನು ಸ್ಥಳೀಯರು ಒತ್ತುವರಿಮಾಡಿಕೊಂಡಿದ್ದು, ಅವರಿಂದ ಭೂಮಿಯನ್ನು ಮತ್ತೆ ಸರ್ಕಾರದ ವಶಕ್ಕೆ ಪಡೆದು ಸೈನಿಕರಿಗೆ ಹಂಚಿಕೆ ಮಾಡಬೇಕು. ಸೈನಿಕರು, ಮಾಜಿ ಸೈನಿಕರಿಗೂ ಉದ್ಯೋಗ ಭತ್ಯೆ ಹಾಗೂ ಭೂಮಿಯನ್ನು ನೀಡಬೇಕು. ತಲಾ ಹತ್ತು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿ.ಸಜ್ಜನ್‌ರಾವ್, ಸತ್ಯ ಎಂ.ಎ.ಎಸ್.ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, ಹುಣಸೂರು ಸೈನಿಕ ಸಂಘದ ಉಪಾಧ್ಯಕ್ಷ ಪ್ರಕಾಶ್ ಪವಾರ್, ಖಜಾಂಚಿ ಕೃಷ್ಣೋಜಿರಾವ್ ಇನ್ನಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.