ನವದೆಹಲಿ: ಕೋಲ್ಕತಾ ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಹಲವಾರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಶಾಮೀಲಾಗಿರುವುದಾಗಿ ಆಸ್ಪತ್ರೆಯ ಮಾಜಿ ಡೆಪ್ಯುಟಿ ಸೂಪರಿಟೆಂಡೆಂಟ್ ಅಖ್ತರ್ ಅಲಿ ಆರೋಪಿಸಿರುವುದಾಗಿ ಇಂಡಿಯಾ ಟುಡೇ ಟಿವಿ ವರದಿ ತಿಳಿಸಿದೆ.
ಸಂದೀಪ್ ಘೋಷ್ ಆಸ್ಪತ್ರೆಯಲ್ಲಿ ಅಪರಿಚಿತ ಶವಗಳನ್ನು ಮಾರುವ ದಂಧೆಯಲ್ಲಿ ಶಾಮೀಲಾಗಿರುವುದಾಗಿ ದೂರಿರುವ ಅವರು, ವೈದ್ಯೆಯ ಕೊಲೆ ಆರೋಪಿ ಪೌರ ಕಾರ್ಮಿಕ ಸಂಜಯ್ ರಾಯ್, ಮಾಜಿ ಪ್ರಾಂಶುಪಾಲ ಘೋಷ್ ನ ಸೆಕ್ಯುರಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿಸಿದ್ದಾರೆ.
ಸಂದೀಪ್ ಘೋಷ್ ಬಯೋಮೆಡಿಕಲ್ ತ್ಯಾಜ್ಯ ಹಾಗೂ ಔಷಧ, ವೈದ್ಯಕೀಯ ಸಾಮಗ್ರಿಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುವ ದಂಧೆಯಲ್ಲೂ ತೊಡಗಿಕೊಂಡಿರುವುದಾಗಿ ಅಲಿ ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ.
ಅಪರಿಚಿತ ಶವಗಳನ್ನು ಮಾರಾಟ ಮಾಡುವ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದ ಘೋಷ್ ವಿರುದ್ಧ ಪ್ರಕರಣ ಕೂಡಾ ದಾಖಲಾಗಿತ್ತು. 2023ರವರೆಗೆ ಆರ್ ಜಿ ಕರ್ ಆಸ್ಪತ್ರೆಯಲ್ಲಿ ಅಖ್ತರ್ ಅಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ವೇಳೆಯೇ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಎಚ್ಚರಿಕೆಯನ್ನು ಕೊಟ್ಟಿರುವುದಾಗಿ ಅಲಿ ತಿಳಿಸಿದ್ದಾರೆ.
ತನಿಖೆಯಲ್ಲಿ ಘೋಷ್ ತಪ್ಪಿತಸ್ಥ ಎಂದು ಪತ್ತೆ ಹಚ್ಚಿದ್ದರೂ ಕೂಡಾ ಆತನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ ತನಿಖಾ ವರದಿಯನ್ನು ರಾಜ್ಯ ಆರೋಗ್ಯ ಇಲಾಖೆಗೆ ಅಲಿ ನೀಡಿರುವುದಾಗಿ ತಿಳಿಸಿದ್ದು, ಅದೇ ದಿನ ಅಲಿಯನ್ನು ಆರ್ ಜಿ ಕರ್ ಆಸ್ಪತ್ರೆಯಿಂದ ವರ್ಗಾವಣೆ ಮಾಡಿರುವುದಾಗಿ ತಿಳಿಸಿದ್ದಾರೆ.