ಜೈಪುರ್: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಜಗನ್ನಾಥ್ ಪಹಾಡಿಯಾ(89ವರ್ಷ) ಕೋವಿಡ್ 19 ಸೋಂಕಿನಿಂದ ಬುಧವಾರ(ಮೇ 19) ನಿಧನರಾಗಿದ್ದಾರೆಂದು ವರದಿ ತಿಳಿಸಿದೆ.
ಇದನ್ನೂ ಓದಿ:ಜಗತ್ತಿನಾದ್ಯಂತ ಹರಡಿದ್ದಾರೆ ಅಮೆರಿಕ ರಹಸ್ಯ ಸೇನೆ ಸಿಗ್ನೇಚರ್ ರಿಡಕ್ಷನ್ ಪಡೆ ಯೋಧರು
1980-81ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ಜಗನ್ನಾಥ್ ಪಹಾಡಿಯಾ ಅವರು ಹರ್ಯಾಣ ಮತ್ತು ಬಿಹಾರದ ಮಾಜಿ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದ್ದರು. ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಪಹಾಡಿಯಾ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪತ್ನಿಯನ್ನೂ ಕೂಡಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಜಗನ್ನಾಥ್ ಪಹಾಡಿಯಾ ಅವರ ನಿಧನ ತಮಗೆ ಆಘಾತ ತಂದಿರುವುದಾಗಿ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ. ಕೋವಿಡ್ ನಿಂದ ಪಹಾಡಿಯಾ ಅವರು ನಿಧನರಾಗಿದ್ದಾರೆ. ಅವರ ನಿಧನದಿಂದ ತುಂಬಾ ಆಘಾತವಾಗಿದೆ. ಆರಂಭದಿಂದಲೂ ನನಗೆ ಅವರು ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದರು. ಅವರ ನಿಧನದಿಂದ ತನಗೆ ವೈಯಕ್ತಿವಾಗಿ ತುಂಬಲಾರದ ನಷ್ಟ ಎಂದು ಗೆಹ್ಲೋಟ್ ಟ್ವೀಟ್ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಪಹಾಡಿಯಾ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒಂದು ದಿನದ ಶೋಕಾಚರಣೆ ಘೋಷಿಸಿದೆ. ಸರ್ಕಾರಿ ಕಚೇರಿಗಳಿಗೂ ರಜೆ ಘೋಷಿಸಿದ್ದು, ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸುವ ಮೂಲಕ ಗೌರವ ಸಲ್ಲಿಸಬೇಕು ಎಂದು ತಿಳಿಸಿದೆ.