ಬೆಂಗಳೂರು: ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜೀವ ಬಲಿ ಪಡೆಯಲು ರಾಜ್ಯ ಸರಕಾರ ಸಂಚು ರೂಪಿಸಿದೆ.
ಕುಟುಂಬವನ್ನು ಮುಗಿಸಲು ಸರಕಾರ ವ್ಯವಸ್ಥಿತ ಹುನ್ನಾರ ನಡೆಸಿ ಯೋಜಿತವಾಗಿ ಗುರಿ ಮಾಡಿಕೊಂಡಿದೆ ಎಂದು ಜೆಡಿಎಸ್ ಗಂಭೀರ ಆರೋಪ ಮಾಡಿದೆ.
ವಕೀಲ ದೇವರಾಜೇ ಗೌಡರ ಜತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿ ಮುಖಂಡ ಎಲ್ ಆರ್.ಶಿವರಾಮೇ ಗೌಡರು ನಡೆಸಿದ್ದಾರೆ ಎನ್ನಲಾದ ಮೊಬೈಲ್ ಸಂಭಾಷಣೆಯ ತುಣುಕುಗಳು ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಜೆಡಿಎಸ್ ತನ್ನ “ಎಕ್ಸ್’ ಖಾತೆಯಲ್ಲಿ ಡಿ.ಕೆ.ಶಿವಕುಮಾರ್ ಮತ್ತು ರಾಜ್ಯ ಸರಕಾರದ ವಿರುದ್ಧ ತೀವ್ರ ಟೀಕೆ ಮಾಡಿದೆ.
ಹೊಂಚು ಹಾಕಿ ಸಂಚು ಮಾಡುವ ಕಾಂಗ್ರೆಸ್‌ನ ಅಸಲಿ ಮುಖ ಕಳಚಿ ಕೆಳಕ್ಕೆ ಬಿದ್ದಿದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಕಾಂಗ್ರೆಸ್ಸಿಗರೇ, ಸತ್ಯ ನಿಮ್ಮ ಮುಂದೆಯೇ ಇದೆ. ನಿಮ್ಮ ಅಧ್ಯಕ್ಷರೇ ಪೆನ್‌ಡ್ರೈವ್ ಫ್ಯಾಕ್ಟರಿಯ ಒರಿಜಿನಲ್ ಓನರ್. ಸಿ.ಡಿ. ಶಿವಕುಮಾರ್ ಗ್ಯಾಂಗ್ ನಡೆಸಿದ ಪೆನ್‌ಡ್ರೈವ್ ಹಂಚಿಕೆಯ ಹೇಯ ಕೃತ್ಯದ ಸಂಚುಗಳೇ ಅವೆಲ್ಲ. ದೇವರಾಜೇ ಗೌಡರ ಹೇಳಿಕೆಯ ಬಳಿಕ ಹೊರಬಿದ್ದಿರುವ ಆಡಿಯೋ ಟೇಪುಗಳೇ ಮಹಾಸಂಚಿನ ಮಹಾಕಥೆಯನ್ನು ಬಿಚ್ಚಿಟ್ಟಿವೆ. ಈಗ ಹೇಳಿ, ಯಾರು ಮೆಂಟಲ್ ಎಂದು ಜೆಡಿಎಸ್ ಪ್ರಶ್ನಿಸಿದೆ.
ಡಿಕೆಶಿಯಿಂದ ನಾಲ್ಕು ಸಂಚು
ಡಿ.ಕೆ.ಶಿವಕುಮಾರ್ ನಾಲ್ಕು ಸಂಚುಗಳನ್ನು ರೂಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಖ್ಯಾತಿ ತರುವುದು, ಕುಮಾರಸ್ವಾಮಿ ನಾಯಕತ್ವ ಹಾಳು ಮಾಡುವುದು, ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮುರಿಯುವಂತೆ ಮಾಡುವುದು ಹಾಗೂ ದೇವೇಗೌಡರ ಜೀವವನ್ನು ಬಲಿ ಪಡೆಯುವುದು ಆ ನಾಲ್ಕು ಸಂಚುಗಳಾಗಿವೆ ಎಂದು ಜೆಡಿಎಸ್ ಆರೋಪಿಸಿದೆ.
ಈ ಸಂಚುಗಳನ್ನು ಜಾರಿಗೊಳಿಸಲು ಡಿ.ಕೆ.ಶಿವಕುಮಾರ್ ಸ್ಲಿಪರ್‌ಸೆಲ್ ರೂಪಿಸಿದ್ದಾರೆ. ಈ ಮಹಾಸಂಚು ಸಾಕಾರಕ್ಕೆ ಶಿವಕುಮಾರ್ 100 ಕೋಟಿ ರೂಪಾಯಿ ಬಂಡವಾಳ ಹೂಡಲಿದ್ದರು ಎಂದು ಜೆಡಿಎಸ್ ಆರೋಪಿಸಿದೆ.