Advertisement

Former Prime Minister: ಮನಮೋಹನ್‌ ಸಿಂಗ್‌ ಕುಟುಂಬದ ಪರಿಚಯ; ನಡೆದು ಬಂದ ಹಾದಿ….

02:26 AM Dec 27, 2024 | Team Udayavani |

1958ರಲ್ಲಿ ಸಿಂಗ್‌ ಅವರು ಗುರುಶರಣ್‌ ಕೌರ್‌ ಎಂಬುವರನ್ನು ವಿವಾಹವಾದರು. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಅವರ ಹೆಸರು ಉಪಿಂದರ್‌ ಸಿಂಗ್‌, ಅಮ್ರಿತ್‌ ಸಿಂಗ್‌ ಹಾಗೂ ದಾಮನ್‌ ಸಿಂಗ್‌. ಉಪಿಂದರ್‌ ಸಿಂಗ್‌ ಅವರು ದೆಹಲಿ ವಿವಿಯಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಎ ಹಿಸ್ಟರಿ ಆಫ್ ಏಂನ್ಶಿಯಂಟ್‌ ಮೆಡಿವಲ್‌ ಇಂಡಿಯಾ ಹಾಗೂ ಏನ್ಶಿಯೆಂಟ್‌ ಡೆಲ್ಲಿ ಎಂಬ ಎರಡು ಕೃತಿಗಳನ್ನು ಅವರು ರಚಿಸಿದ್ದಾರೆ.

Advertisement

ಅಮ್ರಿತ್‌ ಸಿಂಗ್‌ ಅವರು, ಅಮೆರಿಕನ್‌ ಸಿವಿಲ್‌ ಲಿಬರ್ಟೀಸ್‌ನಲ್ಲಿ ಸ್ಟಾಫ್ ಅಟಾರ್ನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು, ದಾಮನ್‌ ಸಿಂಗ್‌ ಅವರು ಗುಜರಾತ್‌ನ ಆನಂದ್‌ನಲ್ಲಿರುವ ಇನ್ಸ್ಟಿಟ್ಯೂಟ್‌ ಆಫ್ ರೂರಲ್‌ ಮ್ಯಾನೇಜ್‌ಮೆಂಟ್‌ ಎಂಬ ವಿಷಯದಲ್ಲಿ ಪದವಿ ಪಡೆದಿದ್ದಾರೆ. ಅವರು, ಐಪಿಎಸ್‌ ಅಧಿಕಾರಿ ಅಶೋಕ್‌ ಪಟ್ನಾಯಕ್‌ ಎಂಬುವರನ್ನು ವಿವಾಹವಾಗಿದ್ದಾರೆ. “ನೈನ್‌ ಬೈ ನೈನ್‌’ ಎಂಬ ಕಾದಂಬರಿಯನ್ನು, “ದ ಲಾಸ್ಟ್‌ ಫ್ರಾಂಟಿಯರ್‌: ಪೀಪಲ್‌ ಆ್ಯಂಡ್‌ ಫಾರೆಸ್ಟ್ಸ್ ಇನ್‌ ಮಿಜೋರಂ’, “ಸ್ಟ್ರಿಕ್ಟ್ಲಿ ಪರ್ಸನಲ್‌: ಮನಮೋಹನ್‌ ಆ್ಯಂಡ್‌ ಗುರುಶರಣ್‌’ ಎಂಬ ಪುಸ್ತಕಗಳನ್ನು ಬರೆದಿದ್ದಾರೆ.

ನಡೆದು ಬಂದ ಹಾದಿ….
ವಿದೇಶದಲ್ಲಿ ಓದು ಮುಗಿಸಿದ ನಂತರ ನೇರವಾಗಿ ಪಂಜಾಬ್‌ ವಿವಿಯಲ್ಲಿ ಪಾಠ ಮಾಡಲು ಶುರುಮಾಡಿದ್ದು 1959ರಲ್ಲಿ. ಆರಂಭದಲ್ಲಿ ಅರ್ಥಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅವರು, 1963ರಲ್ಲಿ ಬಡ್ತಿ ಹೊಂದಿ ಪ್ರಾಧ್ಯಾಪಕರಾದರು.

ಆಮೇಲೆ ಯುನೈಟೆಡ್‌ ನೇಷನ್ಸ್‌ ಕಾನ್ಪರೆನ್ಸ್‌ ಆನ್‌ ಟ್ರೇಡ್‌ ಅಂಡ್‌ ಡೆವಲಪ್‌ಮೆಂಟ್‌ನಲ್ಲಿ 1966ರಿಂದ 1969ರವರೆಗೆ ಕಾರ್ಯನಿರ್ವಹಿಸಿದರು. ಆನಂತರ, 1969ರಿಂದ 1971ರವರೆಗೆ ಇಂಟರ್‌ನ್ಯಾಷನಲ್‌ ಟ್ರೇಡ್‌ನಲ್ಲಿ ಪ್ರಾಧ್ಯಾಪಕರಾಗಿ ದುಡಿದರು.

ಇವೆಲ್ಲ ಪೂರೈಸಿದ ಮೇಲೆಯೇ ವಿದೇಶಿ ವ್ಯವಹಾರ ಸಚಿವಾಲಯದ ಲಲಿತಾ ನಾರಾಯಣ್‌, ಸಿಂಗ್‌ ಅವರ ಬುದ್ಧಿವಂತಿಕೆಯನ್ನು ಗಮನಿಸಿ 1976ರಲ್ಲಿ ವಿತ್ತ ಸಚಿವಾಲಯದ ಆರ್ಥಿಕ ಸಲಹೆಗಾರರಾಗಿ ನೇಮಿಸಿಕೊಂಡಿದ್ದು. 1980ರಿಂದ ಯೋಜನಾ ಆಯೋಗದ ಮುಖ್ಯಸ್ಥರು, ಪ್ರಣಬ್‌ ಮುಖರ್ಜಿ ಕೇಂದ್ರ ಆರ್ಥಿಕ ಸಚಿವರಾಗಿದ್ದಾಗ ಇವರು ಆರ್‌ಬಿಐ ಗವರ್ನರ್‌ ಆದರು. ಸಿಂಗ್‌ ಅವರು, ಜಿನಿವಾದಲ್ಲಿರುವ ಸೌತ್‌ ಕಮೀಷನ್‌ ನ ಕಾರ್ಯದರ್ಶಿಯಾಗಿ, ಅಲ್ಲಿಂದ 1990ರಲ್ಲಿ ಹಿಂದಿರುಗಿದರು. ಆಗ, ಭಾರತದ ಪ್ರಧಾನಿಯಾಗಿದ್ದ ವಿ.ಪಿ.ಸಿಂಗ್‌ ಅವರು ಸಿಂಗ್‌ ಅವರನ್ನು ತಮ್ಮ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರು. ಆನಂತರ, 1992ರಲ್ಲಿ ಅವರು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯು.ಜಿ.ಸಿ.) ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದರು.

Advertisement

ಬೆಂಗಳೂರು ಹೆಗ್ಗಳಿಕೆಗೂ ಪರೋಕ್ಷ ಕಾರಣ
ಬೆಂಗಳೂರಿಗೆ ಭಾರತದ ಸಾಫ್ಟ್ವೇರ್‌ ರಂಗದ ರಾಜಧಾನಿ ಎಂಬ ಹೆಗ್ಗಳಿಕೆಯಿದೆ. ಇದನ್ನು, ಭಾರತದ ಸಿಲಿಕಾನ್‌ ವ್ಯಾಲಿ ಎಂದೂ ಕರೆಯಲಾಗುತ್ತದೆ. ಇದರ ಹಿಂದೆ ಡಾ. ಸಿಂಗ್‌ ಅವರ ಪರೋಕ್ಷ ಕಾಣಿಕೆಯೂ ಕಾರಣ.

ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಮನಮೋಹನ್‌ ಸಿಂಗ್‌ ಅವರು 1991ರಲ್ಲಿ ಕೈಗೊಂಡ ನಿರ್ಧಾರಗಳಲ್ಲಿ “ಸೆಕ್ಯೂರಿಟೀಸ್‌ ಆ್ಯಂಡ್‌ ಎಕ್ಸ್‌ಚೇಂಜ್‌ ಬೋರ್ಡ್‌ ಆಫ್ ಇಂಡಿಯಾ'(ಸೆಬಿ) ಪರಮಾಧಿಕಾರ ನೀಡಿದ್ದೂ ಕೂಡ ಮಹತ್ವವಾದದ್ದು. ಸೆಬಿ ಅಸ್ತಿತ್ವಕ್ಕೆ ಬಂದ ಹೊಸತರಲ್ಲಿ ಭಾರತೀಯ ಕಂಪನಿಗಳ ಉತ್ಪಾದನೆಗಳು ವಿದೇಶಗಳಲ್ಲಿ ಮಾರಾಟವಾದರೆ ಅದಕ್ಕೆ ಗಣನೀಯ ಮಟ್ಟದ ತೆರಿಗೆಯನ್ನು ಕಂಪನಿಗಳು ಪಾವತಿಸಬೇಕಿತ್ತು. ವಿದೇಶಿ ನೇರ ಬಂಡವಾಳವನ್ನು ಆಕರ್ಷಿಸಲು ಇದೂ ಕೂಡ ಒಂದು ತೊಡಕಾಗಿತ್ತು. ಇದನ್ನು ಮನಗಂಡ ಸೆಬಿ, ಈ ಮಾದರಿಯ ತೆರಿಗೆಯನ್ನು ಗಣನೀಯವಾಗಿ ಇಳಿಸಿತು. ಅದಕ್ಕಾಗಿ ಆದಾಯ ತೆರಿಗೆ ನಿಯಮಗಳಲ್ಲಿ 80ಎಂಎಂ ಅಡಿಯ ನಿಯಮಗಳಲ್ಲಿ ಕೆಲವಾರು ವಿನಾಯ್ತಿಗಳನ್ನು ನೀಡಲಾಯಿತು.

ಇದು, ಭಾರತದಲ್ಲಿ ಉತ್ಪಾದನಾ ಘಟಕ ಅಥವಾ ಸೇವಾ ಘಟಕಗಳನ್ನು ತೆರೆಯುವುದು ಅತ್ಯಂತ ಲಾಭದಾಯಕ ಎಂಬುದು ವಿದೇಶಿ ಕಂಪನಿಗಳಿಗೆ ಮನವರಿಕೆಯಾಯಿತು. ಅದು ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ತಮ್ಮ ಶಾಖೆಗಳನ್ನು ಶುರು ಮಾಡಲು ಪ್ರೇರಣೆ ನೀಡಿತು. ಸೆಬಿಯ ಈ ನಿಯಮವನ್ನು ಬಲು ಚೆನ್ನಾಗಿ ಉಪಯೋಗಿಸಿಕೊಂಡಿದ್ದು ಸಾಫ್ಟ್ವೇರ್‌ ಕಂಪನಿಗಳು. ಅದರಿಂದಾಗಿ, ಭಾರತದಲ್ಲಿ ಸಾಫ್ಟ್ವೇರ್‌ ಕಂಪನಿಗಳು ಪ್ರವರ್ಧ ಮಾನಕ್ಕೆ ಬರಲು ಕಾರಣವಾಯಿತು. ಬೆಂಗಳೂರು ಸಾಫ್ಟ್ವೇರ್‌ ಕಂಪನಿಗಳ ರಾಜಧಾನಿ ಎಂದೆನಿಸಲು ಪರೋಕ್ಷವಾಗಿ ನೆರವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next