ನವದೆಹಲಿ: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರ ಪ್ರಬಲ ವಿರೋಧದ ನಡುವೆಯೂ ಕೇಂದ್ರ ಸರ್ಕಾರ, ಸಿಬಿಐ ನಿರ್ದೇಶಕರ ಸ್ಥಾನಕ್ಕೆ ಮಧ್ಯಪ್ರದೇಶದ ಮಾಜಿ ಐಪಿಎಸ್ ಅಧಿಕಾರಿ ರಿಶಿ ಕುಮಾರ್ ಶುಕ್ಲಾ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ. ಹಿಂದಿನ ನಿರ್ದೇಶಕ ಅಲೋಕ್ ವರ್ಮಾ ಅವರ ಪ್ರಕರಣದಲ್ಲಿ ತೀವ್ರ ಮುಜುಗರಕ್ಕೀಡಾಗಿದ್ದ ಸರ್ಕಾರ, ಇದೀಗ ಹೊಸ ನಿರ್ದೇಶಕರನ್ನು ಆಯ್ಕೆ ಮಾಡಿದೆ.
ಕೇಂದ್ರ ಸಿಬ್ಬಂದಿ ಇಲಾಖೆ ಹೊರಡಿಸಿರುವ ಪ್ರಕಟಣೆಯಂತೆ, ಮಧ್ಯಪ್ರದೇಶದ ಮಾಜಿ ಪೊಲೀಸ್ ಮುಖ್ಯಸ್ಥ ಹಾಗೂ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್‌ನ ಹಾಲಿ ಮುಖ್ಯಸ್ಥ, 1983ರ ಐಪಿಎಸ್ ಬ್ಯಾಚ್‌ನ ಅಧಿಕಾರಿಯಾದ ರಿಶಿ ಕುಮಾರ್ ಶುಕ್ಲಾ ಅವರು ಮುಂದಿನ ಎರಡು ವರ್ಷಗಳವರೆಗೆ ಈ ಸೇವೆಯಲ್ಲಿ ಮುಂದುವರಿಯಲಿದ್ದಾರೆ.
ಜ. 10ರಂದು ಅಲೋಕ್ ವರ್ಮಾರನ್ನು ಸಿಬಿಐ ನಿರ್ದೇಶಕರ ಸ್ಥಾನದಿಂದ ತೆರವುಗೊಳಿಸಿದ್ದಾಗಿನಿಂದಲೂ ಆ ಸ್ಥಾನ ಖಾಲಿಯಿತ್ತು. ಆಗಿನಿಂದ, ಸಿಬಿಐಗೆ ಎಂ. ನಾಗೇಶ್ವರ ರಾವ್ ಅವರು ಹಂಗಾಮಿ ಅಧ್ಯಕ್ಷರಾಗಿದ್ದರು. ಶುಕ್ರವಾರವಷ್ಟೇ ಸುಪ್ರೀಂ ಸಿಬಿಐಗೆ ಕಾಯಂ ನಿರ್ದೇಶಕರನ್ನು ಏಕೆ ನೇಮಕ ಮಾಡಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿತ್ತು. ಜತೆಗೆ ಎಷ್ಟು ದಿನಗಳ ವರೆಗೆ ಹಂಗಾಮಿ ನಿರ್ದೇಶಕರನ್ನು ಮುಂದುವರಿಸುತ್ತೀರಿ ಎಂದೂ ಪ್ರಶ್ನಿಸಿತ್ತು.
ಖರ್ಗೆ ಆಕ್ರೋಶ: ನೂತನ ನಿರ್ದೇಶಕರ ಆಯ್ಕೆ ಬೆನ್ನಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಆಯ್ಕೆ ಸಮಿತಿಯ ಸದಸ್ಯರೂ ಆದ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ನೇಮಕಾತಿ ವಿಚಾರವಾಗಿ ತಾವು ಸಲ್ಲಿಸಿರುವ ಟಿಪ್ಪಣಿಯಲ್ಲಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಭ್ರಷ್ಟಾಚಾರ ಪ್ರಕರಣಗಳನ್ನು ನಿರ್ವಹಿಸಿದ ಅನುಭವವಿಲ್ಲದ ಶುಕ್ಲಾ ಅವರನ್ನು ಸಿಬಿಐ ನಿರ್ದೇಶಕರನ್ನಾಗಿಸಿರುವುದು ಸರಿಯಲ್ಲ. ಈ ವಿಚಾರದಲ್ಲಿ ಆಯ್ಕೆಯ ಮಾನದಂಡಗಳನ್ನು ಸರ್ಕಾರ ಸಡಿಲಿಸಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದ ಪ್ರತ್ಯುತ್ತರ: ಖರ್ಗೆಯ ಆರೋಪಕ್ಕೆ ಉತ್ತರಿಸಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಸಿಬಿಐ ಆಯ್ಕೆ ಪ್ರಕ್ರಿಯೆ ವೇಳೆ ಚಾಕಚಕ್ಯತೆ ತೋರಿ ಅದನ್ನು ತಮ್ಮಿಚ್ಛೆಯಂತೆ ನಡೆಸಿಕೊಳ್ಳಲು ಖರ್ಗೆ ಪ್ರಯತ್ನಿಸಿದ್ದರು. ಆಯ್ಕೆ ವೇಳೆ ತಮ್ಮಿಚ್ಛೆಯ ಪೊಲೀಸ್ ಅಧಿಕಾರಿಗಳ ಹೆಸರುಗಳನ್ನು ಖರ್ಗೆ ಪ್ರಸ್ತಾಪ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಆದರೆ, ನೂತನ ನಿರ್ದೇಶಕರ ಆಯ್ಕೆ ವಸ್ತು ನಿಷ್ಠವಾಗಿ ಆಗಿದ್ದು, ಸಮಿತಿಯ ಮತ್ತೂಬ್ಬ ಸದಸ್ಯರಾದ ಸುಪ್ರೀಂಕೋರ್ಟ್ ಮುಖ್ಯ ನ್ಯಾ. ರಂಜನ್ ಗೊಗೋಯ್ ಅವರೂ ಇದನ್ನು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ.
• ಪ್ರಧಾನಿ ನೇತೃತ್ವದಲ್ಲಿ ನಡೆದಿದ್ದ ನಿರ್ದೇಶಕರ ಆಯ್ಕೆ ಸಮಿತಿ ಸಭೆ
• ಸಭೆಯಲ್ಲಿ ಭಾಗಿ ಆಗಿದ್ದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಜೆಐ ಗೊಗೋಯ್
ಸಭೆಯಲ್ಲಿ ಬಿಸಿಬಿಸಿ ಚರ್ಚೆ?
ಪ್ರಧಾನಿ ಮೋದಿ ನೇತೃತ್ವದ ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿಯ ಸಭೆ ಜ. 24 ಹಾಗೂ ಫೆ. 1ರಂದು ನಡೆದಿತ್ತು. ಇದರಲ್ಲಿ ಫೆ. 1ರಂದು ನಡೆದ ಸಭೆಯಲ್ಲಿ ಶುಕ್ಲಾ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಶುಕ್ರವಾರ, ನಿರ್ದೇಶಕರ ನೇಮಕಾತಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದ ಹಿನ್ನೆಲೆಯಲ್ಲಿ, ಪ್ರಧಾನಿ ನಿವಾಸದಲ್ಲಿ ಆಯ್ಕೆ ಸಮಿತಿಯ ಸಭೆ ನಡೆಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಸಭೆಯಲ್ಲಿ ಭಾಗವಹಿಸಿದ್ದರು. ‘ನ್ಯೂಸ್ 18’ ವರದಿಯ ಪ್ರಕಾರ, 1984ನೇ ಬ್ಯಾಚ್‌ನ ಅಧಿಕಾರಿ ಜಾವೇದ್ ಅಹ್ಮದ್, ರಜನಿ ಕಾಂತ್ ಮಿಶ್ರಾ ಹಾಗೂ ಎಸ್‌ಎಸ್ ದೇಸ್ವಾಲ್ ಅವರ ಹೆಸರುಗಳು ಪ್ರಸ್ತಾಪವಾಗಿದ್ದವು. ಖರ್ಗೆಯವರು, ಜಾವೇದ್ ಅಹ್ಮದ್ ಅವರ ನೇಮಕದ ಬಗ್ಗೆ ಒಲವು ಹೊಂದಿದ್ದರು. ಆದರೂ, ಶುಕ್ಲಾ ಅವರ ನೇಮಕಾತಿಗೆ ಸಭೆ ಸಮ್ಮತಿಸಿತು ಎಂದು ಹೇಳಲಾಗಿದೆ.