Advertisement

ದೊರೆ ಹತ್ರ ಕಷ್ಟ ಹೇಳ್ಕೊಳಾಕ್‌ ದೂರದ ಊರಿಂದ ಬಂದೀವಿ…

06:00 AM Jun 29, 2018 | |

ಬೆಂಗಳೂರು: ಒಂದ್‌ ಕಾಲ್ದಾಗ್‌ ನಾವ್‌ ದೇಶ ಸುತ್ತಿ ಘಟಾನುಘಟಿ ಪೈಲ್ವಾನರನ್ನು ಮಣ್ಣು ಮುಕ್ಕಿಸಿವ್ರಿ. ಕರ್ನಾಟಕ ಕಂಠೀರವ, ವೀರ ಕೇಸರಿ,ಕರ್ನಾಟಕ ಕುವರ… ಹಿಂಗಾ ಬಾಳ್‌ ಪ್ರಶಸ್ತಿ ತಗೊಂಡೀವಿ. ಆದ್ರ, ಈಗ ನಮ್ಮನ್ನ ಮಾತನಾಡಿಸುವವರು ಯಾರೂ ಇಲ್ಲರಿ. ಸರ್ಕಾರ ಮಾಸಾಶನ ಕೊಟ್ರಾ, ಬಕಾಸುರನ ಬಾಯಿಗೆ ಅರೆಕಾಸಿನ ಮಜ್ಜಿಗಿ ಅನ್ನುವಂಗಾಗೈತ್ರಿ, ಜೀವನ ನಡೆಸುವುದು ಬಾಳ್‌ ಕಷ್ಟ ಆಗೈತ್ರಿ. ಹಿಂಗಾಗಿ, ದೊರೆಗ್‌ ಕಷ್ಟ ಹೇಳ್ಕೊàಳಾಕ್‌ ಊರಿಂದ ಬಂದಿವ್ರಿ…

Advertisement

– ಹೀಗೆಂದು ಅಲವತ್ತುಕೊಂಡವರು ಮಾಜಿ ಪೈಲ್ವಾನರು. ಧಾರವಾಡ, ಬೆಳಗಾವಿ, ಬಾಗಲಕೋಟೆ ಭಾಗದ ಸುಮಾರು 60ಕ್ಕೂ ಹೆಚ್ಚು ಮಾಜಿ ಪೈಲ್ವಾನರು ಗುರುವಾರ ಬೆಳಗ್ಗೆ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಜೆ.ಪಿ.ನಗರದ ನಿವಾಸದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದರು.

ಮಾಜಿ ಪೈಲ್ವಾನರ ತಂಡದ ನೇತೃತ್ವ ವಹಿಸಿದ್ದ ನವಲಗುಂದ ಶಂಕ್ರಪ್ಪ ಮೂಗನೂರು, “ನಮಗೆ ಈಗ ವಯಸ್ಸಾಗಿದೆ. ವೃದಾಟಛಿಪ್ಯದಲ್ಲಿ ಇನ್ನೊಬ್ಬರ ಬಳಿ ಬೇಡಿ ಪಡೆಯುವ ಸ್ಥಿತಿ ಬಂದಿದೆ. ಸರ್ಕಾರ ನೀಡುತ್ತಿರುವ 2,500ರೂ. ಮಾಸಾಶನ ಬಹಳ ಕಡಿಮೆ ಎನಿಸಿದೆ. ಹಾಗಾಗಿ, ಮಾಸಾಶನವನ್ನು 5000 ರೂ. ಗೆ ಏರಿಕೆ ಮಾಡುವಂತೆ ಮನವಿ ಮಾಡಿದ್ದೇವೆ. ನೆರೆಯ ಮಹಾರಾಷ್ಟ್ರದಲ್ಲಿ ಪುರ ಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಪೈಲ್ವಾನರಿಗೆ ನಿವೇಶನ ನೀಡುವ ಜತೆಗೆ ಮಾಸಾಶನ ಕೂಡ ಸಿಗುತ್ತಿದೆ. ಅದೇ ಮಾದರಿಯಲ್ಲಿ ನಮಗೂ ಸರ್ಕಾರ ಸೌಲಭ್ಯ ಕಲ್ಪಿಸಬೇಕು. ರಾಜ್ಯಮಟ್ಟ ದ ಪೈಲ್ವಾನರಿಗೆ 10 ಸಾವಿರ ರೂ., ರಾಷ್ಟ್ರಮಟ್ಟದ ಪೈಲ್ವಾ ನರಿಗೆ 12 ಸಾವಿರ ರೂ. ಮತ್ತು ಅಂತಾ ರಾಷ್ಟ್ರೀಯ ಮಟ್ಟದ ಪೈಲ್ವಾನರಿಗೆ 15 ಸಾವಿರ ರೂ.ಮಾಸಾಶನ ನೀಡುವಂತೆ ಕೋರಲಾಗಿದೆ ಎಂದರು.

ಉಚಿತ ಬಸ್‌ ಪಾಸ್‌ ವಿತರಿಸಲಿ: ಬಹಳಷ್ಟು ಸಂದರ್ಭದಲ್ಲಿ ನಮ್ಮ ಬಳಿ ಹಣವಿರುವುದಿಲ್ಲ.ಹಾಗಾಗಿ, ಬೇರೆಡೆ ಓಡಾಡಲು ಸಾಧ್ಯವಾಗುತ್ತಿಲ್ಲ. ಮಾಜಿ ಪೈಲ್ವಾನರಿಗೆ ಉಚಿತ ಬಸ್‌ಪಾಸ್‌ ನೀಡಬೇಕು. ಮಾಜಿ ಪೈಲ್ವಾನರ ನಿಧನದ ನಂತರ ಅವರ ಪತ್ನಿಗೆ ಮಾಸಾಶನ ಮಂಜೂರು ಮಾಡಬೇಕೆಂದು ಪೈಲ್ವಾನ್‌ ಸೈಯದ್‌ ಒತ್ತಾಯಿಸಿದರು.

ಸರ್ಕಾರಿ ನೌಕರಿ ನೀಡಲಿ: ಮಾಜಿ ಪೈಲ್ವಾನರು ಈಗ ಸಂಕಷ್ಟದಲ್ಲಿದ್ದು, ಸರ್ಕಾರ ಅವರ ನೆರವಿಗೆ ಬರಬೇಕು. ರಾಜ ಮಹಾರಾಜರಿಂದ ಪ್ರಶಂಸಾ ಪತ್ರ ಪಡೆದಿರುವ ಅಂತಾರಾಷ್ಟ್ರೀಯ ಮಟ್ಟದ ಪೈಲ್ವಾನರು ಕರ್ನಾಟಕದಲ್ಲಿದ್ದಾರೆ. ಇಳಿವಯಸ್ಸಿನಲ್ಲಿ ರುವ ಅವರಿಗೆ ಔಷಧಿ ಖರ್ಚು ಸೇರಿ ಇನ್ನಿತರ ವೆಚ್ಚಗಳಿಗೆ ಆರ್ಥಿಕ ನೆರವು ಬೇಕಿದೆ. ಈ ಕಷ್ಟ ಜೀವಿಗಳ ಕಣ್ಣೀರು ಒರೆಸಲು ಸರ್ಕಾರ ಹೊಸ ಯೋಜನೆ ರೂಪಿಸಬೇಕು. ಜತೆಗೆ ಮಾಜಿ ಪೈಲ್ವಾನರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಸೂಕ್ತ ಸರ್ಕಾರಿ ನೌಕರಿ ನೀಡಬೇಕೆಂದು ಸವದತ್ತಿಯ ಮಾಜಿ ಪೈಲ್ವಾನ್‌ ರಾಜಾ ಸಾಬ್‌ ಮನವಿ ಮಾಡಿದರು.

Advertisement

ಸ್ಪಂದಿಸುವ ವಿಶ್ವಾಸ: ಈ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ನಮ್ಮ ಸಂಕಷ್ಟ ಹೇಳಿಕೊಂಡಿದ್ದೆವು.ಇದೀಗ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾರೆ. ಹೀಗಾಗಿ, ಅವರು ನಮ್ಮ ಮನವಿಗೆ ಸ್ಪಂದಿಸುವ ವಿಶ್ವಾಸವಿದೆ. ಪೈಲ್ವಾನರ ನೆರವಿಗಾಗಿ ಬಜೆಟ್‌ನಲ್ಲಿ ಹೊಸ ಯೋಜನೆ ಜಾರಿಗೊಳಿಸುವ ನಿರೀಕ್ಷೆ ಇದೆ ಎಂದು ಪೈಲ್ವಾನ್‌ ಶಂಕರಪ್ಪ ಹಂಚಿನಾಳ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next