Advertisement

YSR ಕಾಂಗ್ರೆಸ್‌ ಪಕ್ಷ ಸೇರಿದ ಮಾಜಿ ಸಂಸದೆ ಜೆ.ಶಾಂತಾ

10:25 PM Jan 02, 2024 | Team Udayavani |

ಬಳ್ಳಾರಿ: ಮಾಜಿ ಸಚಿವ ಬಿ.ಶ್ರೀರಾಮುಲು ಅವರ ಸಹೋದರಿ, ಮಾಜಿ ಸಂಸದೆ ಜೆ.ಶಾಂತಾ ಅವರು ನೆರೆಯ ಆಂಧ್ರದ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸೇರ್ಪಡೆಯಾಗುವ ಮೂಲಕ ಆಂಧ್ರದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.

Advertisement

ಆಂಧ್ರದ ವಿಜಯವಾಡದಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಿಎಂ ವೈ.ಎಸ್‌.ಜಗನ್ಮೋಹನ್‌ ರೆಡ್ಡಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾಗಿದ್ದು, ಆಂಧ್ರದಲ್ಲಿ ರಾಜಕೀಯದ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದಾರೆ.

2009ರ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ಸಹೋದರ ಬಿ.ಶ್ರೀರಾಮುಲು ನೇತೃತ್ವದಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ ಅಭ್ಯರ್ಥಿ ಎನ್‌.ವೈ.ಗೋಪಾಲಕೃಷ್ಣ ವಿರುದ್ಧ ಶಾಂತಾ ಜಯಗಳಿಸಿದ್ದರು.

2018 ರಲ್ಲಿ ಬಳ್ಳಾರಿ ಲೋಕಸಭೆ ಸಂಸದರಾಗಿದ್ದ ಶ್ರೀರಾಮುಲು ರಾಜೀನಾಮೆಯಿಂದ ತೆರವಾಗಿದ್ದ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಪರಾಭವಗೊಂಡಿದ್ದರು.

2019ರ ಲೋಕಸಭೆ ಮತ್ತು 2023 ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಗಾಗಿ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.

Advertisement

ಈ ಹಿನ್ನೆಲೆಯಲ್ಲಿ ಇದೇ ವರ್ಷ ನೆರೆಯ ಆಂಧ್ರದಲ್ಲಿ ರಾಜ್ಯ ಮತ್ತು ಲೋಕಸಭೆಗೆ ಚುನಾವಣೆಗಳು ನಡೆಯುವ ಹಿನ್ನೆಲೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಆಂಧ್ರದಲ್ಲಿ ಲೋಕಸಭೆಗೆ ಸ್ಪರ್ಧೆ: ಜೆ.ಶಾಂತಾ ಅವರು ಆಂಧ್ರದ ಅನಂತಪುರ ಅಥವಾ ಹಿಂದೂಪುರಂ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಅಲ್ಲದೇ, ಆಂಧ್ರದಲ್ಲಿ ಬಿಜೆಪಿ ಅಷ್ಟಾಗಿ ಬಲಿಷ್ಠವಾಗಿಲ್ಲದ ಹಿನ್ನೆಲೆಯಲ್ಲಿ ಅಲ್ಲಿ ಅಧಿಕಾರದಲ್ಲಿರುವ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಸೇರಿದ್ದಾರೆ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next