ಕಲಬುರಗಿ: ಆಳಂದ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಶಾಸಕ ಸುಭಾಷ ಆರ್. ಗುತ್ತೇದಾರ ವಿನಾಕಾರಣ ಅಡ್ಡಿ ಮಾಡುತ್ತಿದ್ದಾರೆ ಎಂದು ಶಾಸಕ ಬಿ.ಆರ್. ಪಾಟೀಲ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ತಮ್ಮ ಪ್ರಯತ್ನದ ಫಲವಾಗಿ ಕಲಬುರಗಿಯಿಂದ ಆಳಂದ ಬೇರ್ಪಟ್ಟು ಸ್ವತಂತ್ರ ಎಪಿಎಂಸಿಯಾಗಿ ಚನೆಯಾಗಿದೆ. ಈ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿ ಗೋದಾಮು ನಿರ್ಮಾಣಕ್ಕೆ 3ಕೋಟಿ ರೂ. ಬಿಡುಗಡೆಯಾಗಿ ಬಂದಿದ್ದರಿಂದ 5000 ಮೆಟ್ರಿಕ್ ಟನ್ ಸಂಗ್ರಹ ಗೋದಾಮು ನಿರ್ಮಾಣಕ್ಕೆ ಮುಂದಾಗಲಾಗಿದೆ. ಕಾಮಗಾರಿ ಶುರುವಾಗಿದೆ.
ಆದರೆ ಮಾಜಿ ಶಾಸಕರು ಜಾಗಕ್ಕೆ ಸಂಬಂಧವಾಗಿ ಏನೂ ಇರದಿದ್ದರೂ ದಾವೆ ಇದೆ ಎಂದು ಹೇಳಿ ಸ್ಥಳಕ್ಕೆ ಬಂದು ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿದರು. ಪೊಲೀಸ್‌ರು ಆರಂಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತದನಂತರ ಡಿಸಿ ಹಾಗೂ ಎಸ್ಪಿ ಅವರಿಗೆ ದೂರು ನೀಡಿ, ಎಪಿಎಂಸಿ ಜಾಗದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಮಾಡುವಂತಿಲ್ಲ ಎಂಬ ಆದೇಶತೋರಿಸಿದ್ದರಿಂದ ಈಗ ಪೊಲೀಸ್ ಸಹಾಯದಿಂದ ಕೆಲಸ ಶುರುವಾಗಿದೆ ಎಂದು ವಿವರಿಸಿದರು.
ಎಪಿಎಂಸಿ ಜಾಗಕ್ಕೆ ಸಂಬಂಧವಿಲ್ಲದಿದ್ದರೂ ವಿನಾಕಾರಣ ದಾವೆಯೊಂದನ್ನು ಹೂಡಿಸಲಾಗಿದೆ. ಈ ಹಿಂದೆ ಮಳಿಗೆಗಳ ನಿರ್ಮಾಣ ಕಾರ್ಯದ ಸಂದರ್ಭದಲ್ಲೂ ರಾಜಕಾರಣ ಮಾಡಿ ಅಡ್ಡಿ ಮಾಡಲಾಗಿತ್ತು. ದಾವೆ ಹೂಡಿದ್ದರಿಂದ ನಗರಸಭೆಯಿಂದ ಡಾ| ಅಂಬೇಡ್ಕರ ಮೂರ್ತಿಯನ್ನು ಎಪಿಎಂಸಿ ಜಾಗದಲ್ಲಿ ಅನಾವರಣಗೊಳಿಸಲಿಕ್ಕಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜದ ಅಭಿವೃದ್ಧಿಗೆ ಬದ್ಧತೆ ಹೊಂದಿರುವ ಮಹಿಳೆಯರಲ್ಲಿ ಸಂಘಟನೆ ಬಲಗೊಳಿಸಲು ಇತ್ತೀಚೆಗೆ ಆಳಂದ ಪಟ್ಟಣದಲ್ಲಿ ರಾಷ್ಟ್ರೀಯ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಕರೆಯಿಸಿ ಸ್ತ್ರೀ ಶಕ್ತಿ ಸಮಾವೇಶ ಮಾಡಿದರೆ ಅದಕ್ಕೂ ವಿರೋಧ ಮಾಡಲಾಯಿತು. ಮಹಿಳೆಯರು ಜಾಗೃತ ಹಾಗೂ ಸಂಘಟಿತರಾದರೆ ಎಲ್ಲಿ ತಮ್ಮ ಮದ್ಯದ ದಂಧೆಗೆ ತೊಂದರೆಯಾಗುತ್ತದೆ ಎಂಬುದಾಗಿ ತಿಳಿದುಕೊಂಡು ವಿರೋಧಿಸಲಾಯಿತು.
ಹೀಗೆ ಹಲವು ಹಂತಗಳಲ್ಲಿ ಮಾಜಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆ ಎಂದು ಆಪಾದಿಸಿದರು. ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ, ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ಧರಾಮ ಪ್ಯಾಟಿ, ಮುಖಂಡರಾದ ಗಣೇಶ ಪಾಟೀಲ, ಸಿದ್ರಾಮಪ್ಪ ಪಾಟೀಲ, ಶರಣಗೌಡ ಪಾಟೀಲ ಇದ್ದರು.