ಹುಣಸೂರು: ಶಿರಡಿ ಸಾಯಿ ಬಾಬಾ ಟ್ರಸ್ಟ್, ಇ-ಚಾನಲ್ ಹಾಗೂ ಸ್ನೇಹ ಜೀವಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಹುಟ್ಟುಹಬ್ಬದ ಪ್ರಯುಕ್ತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳನ್ನು ಆಚರಿಸಲಾಯಿತು.
ನಗರದಲ್ಲಿ ನಡೆದ ಆರೋಗ್ಯ ಉಚಿತ ತಪಾಸಣೆ ಮತ್ತು ರಕ್ತದಾನ ಶಿಬಿರದ ನಂತರ ಅವರ ಅಭಿಮಾನಿಗಳು, ವಿವಿಧ ಸಂಘ-ಸಂಸ್ಥೆಯ ಸದಸ್ಯರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ಜನ ಪ್ರತಿನಿಧಿಗಳು ಹಾಗೂ ವಿವಿಧ ಗಣ್ಯರು ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದರು.
ಬೆಂಗಳೂರಿನ ಸಪ್ತಗಿರಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ, ಕೊಯಮುತ್ತೂರಿನ ಕಣ್ಣಿನ ಆಸ್ಪತ್ರೆ ವತಿಯಿಂದ ನಡೆದ ಶಿಬಿರದಲ್ಲಿ 1787 ಮಂದಿಯನ್ನು ತಪಾಸಣೆ ಮಾಡಲಾಯಿತು. ಮೈಸೂರಿನ ಜೀವಧಾರ ರಕ್ತನಿಧಿ ಕೇಂದ್ರದಿಂದ ನಡೆದ ರಕ್ತದಾನದಲ್ಲಿ ಯುವಕ-ಯುವತಿಯರು ಸೇರಿದಂತೆ 65 ಮಂದಿ ರಕ್ತದಾನ ಮಾಡಿದರು. ಕಣ್ಣು, ಗರ್ಭಕೋಶ, ಹೃದಯ, ಹರ್ನಿಯಾ, ಮೂಳೆ ಮತ್ತಿತರ ಕಾಯಿಲೆಯುಳ್ಳ, 226 ಮಂದಿ ಶಸ್ತ್ರ ಚಿಕಿತ್ಸೆಗೆ ಆಯ್ಕೆಮಾಡಲಾಯಿತು. 300ಕ್ಕೂ ಹೆಚ್ಚು ಮಂದಿಗೆ ಇಸಿಜಿ ಹಾಗೂ ಎಕೋ ಪರೀಕ್ಷೆ ನಡೆಸಲಾಯಿತು.
ಶಿಬಿರದ ಯಶಸ್ವಿಗೆ ರಾಜ್ಯ ಮರಾಠ ವೆಲ್ ಫೇರ್ ಅಸೋಷಿಯೇಷನ್ ಮನೋಜ್, ಸಪ್ತಗಿರಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹರ್ಷ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆನಂದ್ ಸೇರಿದಂತೆ ಅನೇಕರು ಶ್ರಮಿಸಿದರು. ಜನರಿಂದ ಅಭಿನಂದನೆ ಸ್ವೀಕರಿಸಿದ ಮಾಜಿ ಶಾಸಕ ಮಂಜುನಾಥ್ ಮಾತನಾಡಿದರು.
ನಗರಸ ಸರಸ್ವತಿಪುರಂ ಬಡಾವಣೆಯಲ್ಲಿ ನಗರಸಭಾ ಸದಸ್ಯೆ ಸೌರಭಾ ಸಿದ್ದರಾಜು ಹಾಗೂ ಅವರ ಅಭಿಮಾನಿಗಳ ನೇತೃತ್ವದಲ್ಲಿ 51 ಕೆ.ಜಿ ಕೇಕ್ ಕಟ್ ಮಾಡಿದರು. ಬೃಹತ್ ಹೂವಿನ ಹಾರ, ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು.