ಕಲಬುರಗಿ: ಚಿತ್ತಾಪುರ ಮೀಸಲು ಮತಕ್ಷೇತ್ರದ ಮಾಜಿ ಶಾಸಕ, ಬಿಜೆಪಿಯ ಹಿರಿಯ ಮುಖಂಡ ವಾಲ್ಮೀಕಿ ನಾಯಕ (72 ವ) ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
1987 ರಲ್ಲಿ ವಾಡಿ ಪಟ್ಟಣ ಪಂಚಾಯತಿಯ ಪ್ರಧಾನರಾಗಿ ಸೇವೆ ಸಲ್ಲಿಸಿದ್ದ ವಾಲ್ಮೀಕಿ ನಾಯಕ ನಂತರ 1999 ರಲ್ಲಿ ಶಹಾಬಾದ ಮೀಸಲು ಮತಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ನಡೆಸಿ ಸೋಲನುಭವಿಸಿದ್ದರು. ಮೂರು ಬಾರಿ ಚಿತ್ತಾಪುರ ಮೀಸಲು ಮತಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.
ಮಲ್ಲಿಕಾರ್ಜುನ ಖರ್ಗೆ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಲೋಕಸಭೆಗೆ ಆಯ್ಕೆಯಾದ ನಂತರ 2009ರಲ್ಲಿ ಚಿತ್ತಾಪುರ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಿಯಾಂಕ್ ಖರ್ಗೆ ಅವರನ್ನು ಸೋಲಿಸಿ ವಾಲ್ಮೀಕಿ ನಾಯಕ ವಿಧಾನಸಭೆಗೆ ಆಯ್ಕೆಯಾಗಿದ್ದರು.
ನಂತರ ಎರಡು ಚುನಾವಣೆಯಲ್ಲಿಯಲ್ಲಿ ಸೋಲನುಭವಿಸಿದರೂ ರಾಜಕೀಯದಲ್ಲಿ ಸಕ್ರಿಯವಾಗಿದ್ದರು. ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದ ಯಾವುದಾದರೊಂದು ನಿಗಮ ಮಂಡಳಿಗೆ ನೇಮಕ ಮಾಡುವ ಮುಖಾಂತರ ಸ್ಥಾನಮಾನ ಕಲ್ಪಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದರಲ್ಲದೇ ಪಕ್ಷದ ಬೆಳವಣಿಗೆಯಲ್ಲಿ ತಮ್ಮನ್ನು ಪ್ರಮುಖವಾಗಿ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಶನಿವಾರ ಮಧ್ಯಾಹ್ನ ಒಂದು ಗಂಟೆಗೆ ವಾಡಿ ಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ. ಮೃತರು ಪತ್ನಿ ಸೋನಾಬಾಯಿ, ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.