ಕೊಳ್ಳೇಗಾಲ: ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರ ಬಿಜೆಪಿ ಸೇರ್ಪಡೆಗೆ ಕೊನೆಗೂ ವೇದಿಕೆ ಸಿದ್ದವಾಗಿದ್ದು, ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಕಾಮಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಿಮಳಾ ದೇಶದೆಲ್ಲೆಡೆ ಬಿಜೆಪಿ ಪರವಾದ ಅಲೆ ಇದೆ. ನಾನು ಯಡಿಯೂರಪ್ಪ ಅವರ ಕೈ ಬಲ ಪಡಿಸಲು ಬಿಜೆಪಿಗೆ ವಾಪಾಸಾಗುತ್ತಿದ್ದೇನೆ ಎಂದರು.
ನಾನು ಈ ಹಿಂದೆ ಹನೂರು ಕ್ಷೇತ್ರದಿಂದ ಆಯ್ಕೆಯಾಗಿದ್ದು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೇಟ್‌ನ ಆಕಾಂಕ್ಷಿಯಾಗಿದ್ದೇನೆ. ಆದರೆ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದರು.
ಪದೇ ಪದೇ ಪಕ್ಷ ಬದಲಿಸುವ ವಿಚಾರದಲ್ಲಿ ನನ್ನ ಬೆಂಬಲಗರಲ್ಲಿ ಗೊಂದಲವಿದೆ ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದರು.
2008ರ ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡಿದ್ದ ಪರಿಮಳಾ ನಾಗಪ್ಪ, ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದರು. ಬಳಿಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಥಾಪಿಸಿದ್ದ ಕೆಜೆಪಿಗೆ ಸೇರಿದ್ದ ಅವರು, 2013ರ ವಿಧಾನಸಭಾ ಚುನಾವಣೆ ವೇಳೆ ಮತ್ತೆ ಜೆಡಿಎಸ್ ಸೇರಿ, ಸ್ಪರ್ಧಿಸಿ ಸೋತಿದ್ದರು.
ಇದೀಗ ಹನೂರು ಕ್ಷೇತ್ರದ ಮೇಲೆ ಮಾಜಿ ಸಚಿವ ವಿ.ಸೋಮಣ್ಣ ಕಣ್ಣಿಟ್ಟಿದ್ದು ಬಿಜೆಪಿ ಟಿಕೇಟ್ ಆಕಾಂಕ್ಷಿ ಯಾಗಿದ್ದಾರೆ. ಇದೇ ಕಾರಣಕ್ಕಾಗಿ ಪರಿಮಳಾ ಅವರ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಮುಂದೂಡಲಾಗಿತ್ತು.