ಶಿವಮೊಗ್ಗ: ಭದ್ರಾವತಿಯ ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಜೆ. ಅಪ್ಪಾಜಿ ಗೌಡ ಬುಧವಾರ ರಾತ್ರಿ ವಿಧಿವಶರಾಗಿದ್ದಾರೆ. ಸಂಜೆ ವೇಳೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಕ್ಷಣವೇ ಚಿಕಿತ್ಸೆ ನೀಡಲಾಯಿತಾದರೂ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ನೌಕರರಾಗಿದ್ದ ವೇಳೆ ಕಾರ್ಮಿಕ ಸಂಘಟನೆಯ ಮುಂದಾಳತ್ವ ವಹಿಸಿದ್ದ ಅಪ್ಪಾಜಿ ಗೌಡ ನಂತರ ಸಕ್ರಿಯ ರಾಜಕೀಯಕ್ಕೆ ಪ್ರವೇಶ ಮಾಡಿದರು. 1994ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭದ್ರಾವತಿಯ ಶಾಸಕರಾಗಿ ಆಯ್ಕೆಯಾದರು. ನಂತರ. 1999ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಿಸಿ ನಂತರ ಕಾಂಗ್ರೆಸ್ ಗೆ ಸೇರ್ಪಡೆಯಾದರು.
2013ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿ ಗೆದ್ದ ಗೌಡರು 2018ರ ಚುನಾವಣೆಯಲ್ಲಿ ಸೋತಿದ್ದರು. ಇದಾದ ನಂತರ ಪಕ್ಷದ ಸಂಘಟನೆ ಹಾಗೂ ಸರ್ಕಾರದ ವಿರುದ್ಧದ ಹೋರಾಟದಲ್ಲಿ ತೊಡಗಿಕೊಂಡಿದ್ದರು. ತಮ್ಮ ಎದುರಾಳಿ ಹಾಗೂ ಹಾಲಿ ಶಾಸಕ ಕಾಂಗ್ರೆಸ್ ನ ಬಿ.ಕೆ.ಸಂಗಮೇಶ ವಿರುದ್ಧ ಸಮಯ ಸಿಕ್ಕಾಗಲೆಲ್ಲಾ ಹರಿಹಾಯುತ್ತಿದ್ದರು.
ಭದ್ರಾವತಿಯ ತಹಸೀಲ್ದಾರ್ ವಿರುದ್ಧ ಆಗಸ್ಟ್ 31 ರಂದು ಪ್ರತಿಭಟನೆ ಹಮ್ಮಿಕೊಂಡಿದ್ದರಾದರೂ ನಂತರ ಅದು ರದ್ದಾಗಿತ್ತು. ಇದಾದ ನಂತರ ಗಂಟಲು ನೋವಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿತ್ತು. ಅದು ಬುಧವಾರ ಸಂಜೆಯ ನಂತರ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಗೌಡರು ಚಿಕಿತ್ಸೆ ಫಲಿಸದೆ ಮೃತಪಟ್ಟರು.
ಮಾಜಿ ಶಾಸಕ ಅಪ್ಪಾಜಿ ಗೌಡ ನಿಧನಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಭದ್ರಾವತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರು, ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾದ ಎಂ.ಜೆ. ಅಪ್ಪಾಜಿ (ಅಪ್ಪಾಜಿ ಗೌಡ್ರು) ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ತೀರಾ ದುಖಃವಾಯಿತು. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.