Advertisement

ಮಾಜಿ ಶಾಸಕ ಲೋಬೋ ಅವರಿಗೆ ಪಾಲಿಕೆಯಲ್ಲಿ ಕಚೇರಿ: ಬಿಜೆಪಿ ಪ್ರತಿಭಟನೆ 

12:38 PM Aug 09, 2018 | |

ಲಾಲ್‌ಬಾಗ್‌ : ಮಲ್ಲಿಕಟ್ಟೆಯ ಮನಪಾ ಕಚೇರಿಯಲ್ಲಿ ಮಾಜಿ ಶಾಸಕ ಜೆ. ಆರ್‌.ಲೋಬೋ ಅವರಿಗೆ ಕಚೇರಿ ನೀಡಿರುವುದನ್ನು ವಿರೋಧಿಸಿ ಹಾಗೂ ಪುರಭವನಕ್ಕೆ ಕುದ್ಮುಲ್‌ ರಂಗರಾವ್‌ ಹೆಸರಿಡುವಂತೆ ಆಗ್ರಹಿಸಿ ಬಿಜೆಪಿ ವತಿಯಿಂದ ನಗರದ ಲಾಲ್‌ಬಾಗ್‌ನಲ್ಲಿರುವ ಮನಪಾ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ಜರಗಿತು.

Advertisement

ಈ ವೇಳೆ ಮಾತನಾಡಿದ ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಮಾಜಿ ಶಾಸಕ ಲೋಬೋ ಅವರು ಇನ್ನೂ ಕೂಡ ಅಧಿಕಾರದಲ್ಲಿದ್ದಾರೆ ಎಂಬ ಮನಃಸ್ಥಿತಿಯನ್ನು ಇಟ್ಟುಕೊಂಡಿದ್ದಾರೆ. ಅದಕ್ಕಾಗಿ ಪಾಲಿಕೆ ಕಟ್ಟಡದಲ್ಲಿರುವ ಕೊಠಡಿಯನ್ನು ಪಡೆದುಕೊಂಡಿದ್ದಾರೆ. ಅಧಿಕಾರ ಇಲ್ಲದಿದ್ದರೂ ಆಡಳಿತ ಯಂತ್ರವನ್ನು ದುರುಪಯೋಗ ಮಾಡಿ ಕೊಳ್ಳುತ್ತಿರುವುದು ಸರಿಯಲ್ಲ ಎಂದರು. ಪಾಲಿಕೆಯ ವಾಣಿಜ್ಯ ಮಳಿಗೆ/ಕೊಠಡಿಗಳನ್ನು ಖಾಸಗಿ ವ್ಯಕ್ತಿ ಪಡೆಯಬೇಕಾದರೆ ಬಿಡ್‌ ಸಲ್ಲಿಸಬೇಕು ಎಂಬುದು ಕಾನೂನು. ಆದರೆ ಇಲ್ಲಿ ಕಾನೂನು ಪಾಲಿಸದೆ, ಸಾಮಾನ್ಯ ಸಭೆಯಲ್ಲಿಯೂ ಈ ಬಗ್ಗೆ ಚರ್ಚೆ ನಡೆಸದೆ, ಕಾನೂನುಬಾಹಿರವಾಗಿ ಕೊಠಡಿ ನೀಡಲಾಗುತ್ತಿದೆ ಎಂದರು.

ಕಾರ್ಪೊರೇಟರ್‌ ರೂಪಾ ಡಿ. ಬಂಗೇರ ಮಾತನಾಡಿ, ರಾಜಕೀಯ ಸ್ವಾರ್ಥಕ್ಕಾಗಿ ಮಾಜಿ ಶಾಸಕರು ಮನಪಾ ಕೊಠಡಿಯನ್ನು ಪಡೆದುಕೊಂಡಿದ್ದಾರೆ ಎಂದು ಆಪಾದಿಸಿದರು. ಬಡವರು, ದಲಿತರ ಪರ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷವು ಪುರಭವನಕ್ಕೆ ಕುದ್ಮುಲ್‌ ರಂಗರಾವ್‌ ಹೆಸರಿಡಲು ಮೀನಮೇಷ ಎಣಿಸುತ್ತಿದೆ. ತತ್‌ಕ್ಷಣ ಕುದ್ಮುಲ್‌ ರಂಗರಾವ್‌ ಹೆಸರನ್ನು ಪುರಭವನಕ್ಕೆ ಇಡಬೇಕು ಎಂದು ಒತ್ತಾಯಿಸಿದರು.

ಶಾಸಕ ಡಾ| ವೈ. ಭರತ್‌ ಶೆಟ್ಟಿ, ಕಾರ್ಪೊರೇಟರ್‌ಗಳಾದ ಸುಧೀರ್‌ ಶೆಟ್ಟಿ ಕಣ್ಣೂರು, ವಿಜಯ್‌ ಕುಮಾರ್‌, ಪೂರ್ಣಿಮಾ, ದಿವಾಕರ್‌, ರಾಜೇಶ್‌, ರಾಜೇಂದ್ರ, ಜಯಂತಿ ಆಚಾರ್‌, ಪೂರ್ಣಿಮಾ, ಸುರೇಂದ್ರ, ಮುಖಂಡ ರಾದ ಭಾಸ್ಕರಚಂದ್ರ ಶೆಟ್ಟಿ, ಸಂಜಯ್‌ ಪ್ರಭು, ನಿತಿನ್‌ ಕುಮಾರ್‌, ರವಿಚಂದ್ರ, ಕಾತ್ಯಾಯಿನಿ, ಗುರುಚರಣ್‌ ಮೊದಲಾದವರು ಉಪಸ್ಥಿತರಿದ್ದರು.

ನ್ಯಾಯೋಚಿತವಲ್ಲ 
ಮಾಜಿ ಶಾಸಕ ಜೆ. ಆರ್‌. ಲೋಬೋ ಅವರಿಗೆ ಯಾವ ಆಧಾರದಲ್ಲಿ ಪಾಲಿಕೆಯಲ್ಲಿ ಕಚೇರಿ ನೀಡಲಾಗಿದೆ ಎಂಬುದಕ್ಕೆ ಸಮರ್ಪಕವಾದ ಉತ್ತರಗಳಿಲ್ಲ. ಮಾಜಿ ಆದ ಬಳಿಕ ಕಚೇರಿಯನ್ನು ಪಡೆದುಕೊಳ್ಳುವುದು ಮತ್ತು ಬಳಕೆ ಮಾಡುವುದು ಸರಿಯಲ್ಲ. ಕಾನೂನನ್ನು ಗಾಳಿಗೆ ತೂರುವುದು ನ್ಯಾಯೋಚಿತವಲ್ಲ ಎಂದು ಮಾಜಿ ಶಾಸಕ ಯೋಗೀಶ್‌ ಭಟ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next