ಧಾರವಾಡ : ನಮ್ಮ ಕಾಲದ ರಾಜಕಾರಣಕ್ಕೂ, ಈಗಿನ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸವುಂಟು. ಈಗಿನ ರಾಜಕಾರಣದ ಸ್ಥಿತಿ ಅವಲೋಕಿಸಿದಾಗ ಕೋಟಿ ಕೊಟ್ಟರೂ ಚುನಾವಣೆಗೆ ನಿಲ್ಲೋದಿಲ್ಲ ಎಂದು ಮಾಜಿ ಸಚಿವೆ ಡಾ.ಲೀಲಾದೇವಿ ಆರ್. ಪ್ರಸಾದ್ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಯಾರಾದರೂ ಬಂದು ಚುನಾವಣೆಗೆ ನಿಲ್ಲುತ್ತೀರಾ ಅಂತ ಕೇಳಿದರೆ ದೊಡ್ಡದಾಗಿ ಕೈ ಮುಗಿದು ಬಿಡುವೆ. ಅಷ್ಟೊಂದು ಕೆಳಮಟ್ಟದ ರಾಜಕಾರಣವಿದೆ. ತತ್ವ, ಸಿದ್ದಾಂತ, ನ್ಯಾಯ, ನಿಷ್ಠೆ, ಹಿರಿಯರಿಗೆ ಗೌರವ ಕೊಡುವ ಭಾವನೆ ಈಗಿನ ರಾಜಕಾರಣದಲ್ಲಿ ಇಲ್ಲ. ಅಷ್ಟೊಂದು ಕೆಳಮಟ್ಟದ ರಾಜಕಾರಣ ಇದೆ ಎಂದರೆ ಅಪ್ಪನಿಗೆ ಅಪ್ಪ ಅನ್ನಲು ಎಷ್ಟು ದುಡ್ಡು ಕೊಡತ್ತೀಯಾ ಅಂತ ಕೇಳುವ ದುಸ್ಥಿತಿ ಇದೆ ಎಂದರು.
ಈವರೆಗೆ 10 ಚುನಾವಣೆ ಎದುರಿಸಿದ್ದು, ಒಂದಿಷ್ಟು ಸೋಲಿಸಿದ್ದು, ಒಂದಿಷ್ಟು ಗೆದ್ದಿರುವೆ. ನಾಲ್ಕು ಸಿಎಂ ಅವಧಿಯಲ್ಲಿ ಮಂತ್ರಿ ಸ್ಥಾನ ಪಡೆದು ೮ಕ್ಕೂ ಹೆಚ್ಚು ಖಾತೆ ನಿರ್ವಹಿಸಿದ್ದು, ಈ ಅವಽಯಲ್ಲಿ ಹಣ ಮಾಡಿಲ್ಲ, ಹೆಸರು ಉಳಿಸಿಕೊಂಡಿದ್ದೇನೆ. ಈಗಿನ ರಾಜಕಾರಣದ ವೈಪರೀತ್ಯ ನೋಡಿದಾಗ ನಾವೇ ಅದೃಷ್ಟವಂತರು. ಹಳೆಯ ರಾಜಕಾರಣದಲ್ಲಿ ರಾಜಕೀಯಕ್ಕೆ ಬಂದು ಒಂದಿಷ್ಟು ಒಳ್ಳೆಯ ಸೇವೆ ಮಾಡಿದ್ದೇವೆ ಎಂದರು.
ದೇಶದಲ್ಲಿ ಈಗ ಕಾಂಗ್ರೆಸ್ ಪಕ್ಷ ದುರ್ಬಲವಾಗಿದ್ದು, ಈ ದುರ್ಬಲಕ್ಕೆ ಕಾರಣ ಯಾರೆಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಪ್ರಾದೇಶಿಕ ಪಕ್ಷಗಳು ಬಿಜೆಪಿ ಕೈ ಜೋಡಿಸಿದ್ದು, ಈ ಕಾರಣಕ್ಕೆ ಕರ್ನಾಟಕದಲ್ಲಿ ಜೆಡಿಎಸ್ ಬಿಜೆಪಿ ಬೆಂಬಲಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟು ಆಗಿ ಚುನಾವಣೆ ಎದುರಿಸಲಿವೆ ಎಂದರು.
ಇದನ್ನೂ ಓದಿ: ರಾಜ್ಯ ಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಎಸ್.ಟಿ.ಸೋಮಶೇಖರ್ ವಿರುದ್ಧ ಸಿ.ಟಿ.ರವಿ ಕಿಡಿ