ಚಿಂತಾಮಣಿ: ಗುತ್ತಿಗೆದಾರರಿಂದ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಒಂದು ರೂ. ಕಮಿಷನ್ ಪಡೆದಿಲ್ಲ ಎಂದು ಪ್ರಮಾಣ ಮಾಡಲಿ ಅಥವಾ ನಾನು ಯಾರಿಂದಲೂ ಒಂದು ರೂಪಾಯಿ ಕಮಿಷನ್ ಪಡೆದಿದ್ದೀನಿ ಎಂದು ಸಾಬೀತು ಪಡಿಸಲಿ, ಆಗ ರಾಜಕೀಯದಿಂದ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಮಾಜಿ ಶಾಸಕ ಡಾ. ಎಂ.ಸಿ.ಸುಧಾಕರ್ ಸವಾಲು ಹಾಕಿದರು.
ತಾಲೂಕಿನ ಮುಂಗನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಜೆಡಿಎಸ್ ತೊರೆದು “ಕೈ’ ಸೇರಿದ ಕಾರ್ಯಕರ್ತರನ್ನು ಸ್ವಾಗತಿಸಿ ಮಾತನಾಡಿದ ಅವರು, ಕೋವಿಡ್ ಸಂದರ್ಭದಲ್ಲಿ ವೈದ್ಯರಿಗೆ ಹಾಲಿ ಶಾಸಕ ಲಂಚದ ಹಣದಿಂದ ಗೌರವಧನ ನೀಡಿದ್ದಾರೆ. ಕೋವಿಡ್ ವೇಳೆ ಕ್ಷೇತ್ರದಲ್ಲಿ ಜನತೆ ಸಾಯುತ್ತಿದ್ದರೆ, ಇವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ಬಿರಿಯಾನಿ ಮಾಡಿಕೊಂಡು ಮಜಾ ಮಾಡುತ್ತಿದ್ದರು ಎಂದು ದೂರಿದರು.
ಕಾಂಕ್ರೀಟ್ ರಸ್ತೆ ನಿರ್ಮಿಸಿಲ್ಲ: ರಾಜ್ಯದಲ್ಲೇ ಮಾದರಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಬೇಕೆಂಬ ಆಸೆ ನನ್ನದಾಗಿತ್ತು. ಆದರೆ, ಈಗ ಯಾವುದೇ ಕೆಲಸಕ್ಕೆ ಬಾರದಂತೆ ನಿರ್ಮಿಸಿರುವುದು ಎಷ್ಟರ ಮಟ್ಟಿಗೆ ಸರಿ. ತಾಲೂಕಿನಲ್ಲಿ ಪರಿಶಿಷ್ಟರು ಇರುವ ಕಾಲೋನಿಗಳಲ್ಲಿ ನನ್ನ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು ಬಿಟ್ಟರೆ 10 ವರ್ಷಗಳಿಂದ ಒಂದು ಇಂಚು ಕಾಂಕ್ರೀಟ್ ರಸ್ತೆ ಆಗಲಿಲ್ಲ ಎಂದು ದೂರಿದರು.
ಸಮಾಜ ಸೇವೆ ಎಲ್ಲಿ ಹೋಯ್ತು: ಮುಂಗಾನಹಳ್ಳಿ ಹೋಬಳಿಯ ಹಲವು ರಸ್ತೆಗಳು ನನ್ನ ಅವಧಿಯಲ್ಲಿ ಅಭಿವೃದ್ಧಿಯಾಗಿವೆ. ಆದರೆ, 10 ವರ್ಷಗಳಲ್ಲಿ ಆ ರಸ್ತೆಗಳಿಗೆ ಡಾಂಬರು ಹಾಕಿಸುವ ಯೋಗ್ಯತೆ ಶಾಸಕರಿಗೆ ಇಲ್ಲ. ಈ ಕ್ಷೇತ್ರದ ಶಾಸಕರಾಗುವ ಮುಂಚೆ, ಗಣೇಶ ಹಬ್ಬ ಬಂದರೆ ಗಣೇಶನ ಮೂರ್ತಿ ಕೊಡಿಸುವುದು, ರಂಜಾನ್ ಬಂದರೆ ಮುಸ್ಲಿಮರಿಗೆ ಆಹಾರ ಧಾನ್ಯ ವಿತರಣೆ ಮಾಡುವುದು, ಶಾಸಕರಾದ ನಂತರ ಈ ಎಲ್ಲಾ ಸಮಾಜ ಸೇವೆಗಳು ಎಲ್ಲಿ ಮಾಯವಾದವು ಎಂದು ಪ್ರಶ್ನಿಸಿದರು.
ಈ ವೇಳೆ ಗ್ರಾಮದ ರಾಮಚಂದ್ರಪ್ಪ, ಅಶೋಕ್, ಪ್ರಭಾಕರ, ಸುಧಾಕರ್, ಶ್ರೀನಾಥ್, ರಮೇಶ್, ನಾಗರಾಜ್, ದಿಲೀಪ್, ವಕೀಲರಾದ ವೆಂಕಟೇಶ್, ಕೋನಪ್ಪ, ನಾರಾಯಣ್, ತಿಪ್ಪಣ್ಣ, ರಾಮಪ್ಪ, ಮಂಜು, ನವೀನ್ ಎಂ.ಕೆ.ಗಗನ್, ಸೀನಾ ಎಂ. ಗಂಗಾಧರ್, ಓಬಲೇಶ್, ಮಲ್ಲಿಕಾರ್ಜುನ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ರೆಡ್ಡಿ, ಡಾಬಾ ನಾಗರಾಜ್, ಟಿಎಪಿಸಿಎಂಎಸ್ ಅಧ್ಯಕ್ಷ ಮಾದಮಂಗಲ ಚಂದ್ರಪ್ಪ, ಜಿಪಂ ಮಾಜಿ ಸದಸ್ಯ ಸ್ಕೂಲ್ ಸುಬ್ಟಾರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗಿರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ರವಿ, ರಾಗುಟಹಳ್ಳಿ ರಘು, ಡಾ.ಅಶೋಕ್‌ಕುಮಾರ್, ಶ್ರೀನಿವಾಸರೆಡ್ಡಿ, ಚಿನ್ನಪ್ಪ, ಕೃಷ್ಣಾರೆಡ್ಡಿ, ನಾರಾಯಣಸ್ವಾಮಿ, ದಯಾನಂದರೆಡ್ಡಿ, ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎಂ. ವೆಂಕಟರೌಣಪ್ಪ, ಸಂತೆಕಲ್ಲಿ ಗೋವಿಂದಪ್ಪ, ತಾಪಂ ಮಾಜಿ ಅಧ್ಯಕ್ಷ ರೆಡ್ಡಪ್ಪ ಇದ್ದರು. ಮುಖಂಡರಾದ ಕುಮಾರ್‌ರೆಡ್ಡಿ, ಬೀಡಾ ಶ್ರೀನಿವಾಸ್, ಆರ್‌ಎಂಜಿ ಶ್ರೀನಿವಾಸ್, ಸೋಮು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.