ಹೈದರಾಬಾದ್ : ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಎಂ ಮುಕೇಶ್ ಗೌಡ್ ಅವರ ಪುತ್ರ ವಿಕ್ರಂ ಗೌಡ್ ಅವರ ಮೇಲೆ ಅಪರಿಚಿತ ವ್ಯಕ್ತಿಗಳು ಬಂಜಾರಾ ಹಿಲ್ಸ್‌ನ ಗಾಯತ್ರಿ ನಗರದಲ್ಲಿರುವ ಅವರ ಮನೆಯಲ್ಲಿ ಎರಡು ಸುತ್ತಿನ ಗುಂಡೆಸೆದು ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಅಪರಿಚಿತರು ಹಾರಿಸಿದ ಎರಡೂ ಗುಂಡುಗಳು ವಿಕ್ರಂ ಅವರ ಬಲ ಕೈ ರಟ್ಟೆಗೆ ತಗುಲಿವೆ. ಒಂದು ಗುಂಡು ಇನ್ನೊಂದು ಬದಿಯಿಂದ ಹೊರಬಂದಿದೆಯಾದರೆ ಇನ್ನೊಂದು ಗುಂಡು ಬಲಗೈ ರಟ್ಟೆಯೊಳಗೇ ಉಳಿದಿದೆ.
ವಿಕ್ರಂ ಅವರ ಪತ್ನಿ ಶಿಫಾಲಿ ಅವರು ಘಟನೆ ಬಗ್ಗೆ ಬಂಜಾರಾ ಪೊಲೀಸರಿಗೆ ಹೀಗೆ ಹೇಳಿದ್ದಾರೆ : “ನಾನು ಮತ್ತು ಪತಿ ವಿಕ್ರಂ ನಸುಕಿನ ವೇಳೆ ದೇವಸ್ಥಾನಕ್ಕೆ ಹೋಗವವರಿದ್ದೆವು. ಆಗ ನಸುಕಿನ 3.30ರ ಹೊತ್ತಿಗೆ ಗುಂಡೇಟಿನ ಸದ್ದು ಕೇಳಿ ಬಂತು. ನಾನು ಒಡನೆಯೇ ವಿಕ್ರಂ ಇದ್ದ ಮೊದಲ ಮಹಡಿಗೆ ಧಾವಿಸಿದೆ. ಅಗಲೇ ವಿಕ್ರಂ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂತು. ಅದೇ ವೇಳೆ ಇಬ್ಬರು ಅಪರಿಚಿತರು ಮನೆಯಿಂದ ಹೊರಗೋಡಿ ಹೋಗುತ್ತಿದ್ದುದನ್ನು ನಾನು ಕಂಡೆ’.
ವಿಕ್ರಂ – ಶಿಫಾಲಿ ಇರುವುದು ಡೂಪ್ಲೇ ಮನೆಯಲ್ಲಿ. ಆದರೆ ಗಂಡ – ಹೆಂಡತಿ ಒಂದೇ ಮನೆಯಲ್ಲಿ ಬೇರೆ ಬೇರೆಯಾಗಿ ಇದ್ದಾರೆ. ಪತ್ನಿ ಶಿಫಾಲಿ ಜತೆಗೆ ಮಗಳು ಕೂಡ ಇದ್ದಾಳೆ.
ಕೇಸು ದಾಖಲಿಸಿಕೊಂಡು ತನಿಖೆಗೆ ನಿರ್ದೇಶ ನೀಡಿರುವ ಹೈದರಾಬಾದ್ ಪೊಲೀಸ್ ಕಮಿಷನರ್ ಎಂ ಮಹೇಂದ್ರ ರೆಡ್ಡಿ ಅವರು ವಿಕ್ರಂ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. “ದಾಳಿಕೋರರನ್ನು ಪತ್ತೆ ಹಚ್ಚಿ ಹಿಡಿಯಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ವಿಕ್ರಂ ಮನೆಯ ಹೊರಭಾಗದಲ್ಲಿ ಸಿಸಿಟಿವಿ ಕ್ಯಾಮರಾಗಳು ಇಲ್ಲ. ಹಾಗಾಗಿ ನೆರೆಕರೆಯಲ್ಲಿರುವ ಸಿಸಿಟಿವಿ ಗಳಲ್ಲಿ ದಾಖಲಾಗಿರುವ ಚಿತ್ರಿಕೆಗಳನ್ನು ಪರಿಶೀಲಿಸಬೇಕಾಗಿದೆ’ ಎಂದು ರೆಡ್ಡಿ ಹೇಳಿದ್ದಾರೆ.