ಹುಬ್ಬಳ್ಳಿ: ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಬೆಂಬಲಿಗರು ನನಗೆ ವಿಷ ಕೊಟ್ಟು ಸಾಯಿಸುವ ಮೊದಲೇ ನನಗೆ ದಯಾಮರಣಕ್ಕೆ ಅನುಮತಿ ನೀಡಬೇಕೆಂದು ರಾಷ್ಟ್ರಪತಿಗೆ ಮನವಿ ಮಾಡಿರುವುದಾಗಿ ಧಾರವಾಡ ಮುರುಘಾಮಠದ ಹಿಂದಿನ ಪೀಠಾಧಿಪತಿ ಶ್ರೀ ಶಿವಯೋಗಿ ಸ್ವಾಮೀಜಿ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿನಯ ಕುಲಕರ್ಣಿ ಕುತಂತ್ರ ಹಾಗೂ ಅವರ ಬೆಂಬಲಿಗರಿಂದ ನಾನು ಮಠ ಬಿಟ್ಟು ಹೊರ ಬರಬೇಕಾಯಿತು. ನಾನು ಯಾವುದೇ ತಪ್ಪು ಮಾಡದಿದ್ದರೂ ನನ್ನ ಮೇಲೆ ಹಲ್ಲೆ ನಡೆಸಲಾಯಿತು. ಮುರುಘಾ ಮಠದಲ್ಲಿ ನಡೆದ ಘಟನೆಯ ಸತ್ಯಾಂಶ ಬಹಿರಂಗಗೊಳ್ಳಬೇಕು ಎಂದರು.
2008ರ ವಿಧಾನಸಭಾ ಚುನಾವಣೆಯಲ್ಲಿ ನಾನು ಬಿಜೆಪಿ ಪರ ಪ್ರಚಾರ ಮಾಡಿದ್ದೇನೆಂದು ಆರೋಪಿಸಿ ವಿನಯ ಕುಲಕರ್ಣಿಯ ಶಿಷ್ಯರು ನನ್ನ ಮೇಲೆ ಹಲ್ಲೆ ನಡೆಸಿ ಮಠದಿಂದ ಹೊರ ಹಾಕಿದರು. ವಿನಯ ಕುಲಕರ್ಣಿಯ ಬೆಂಬಲಿಗರು ನನ್ನನ್ನು ಧಾರವಾಡದ ಚರಂತಿ ಗಾರ್ಡನ್‌ಗೆ ಕರೆದೊಯ್ದು ಪಿಸ್ತೂಲ್ ತೋರಿಸಿ ಪೀಠತ್ಯಾಗ ಪತ್ರ ಬರೆಯುವಂತೆ ಧಮಕಿ ಹಾಕಿದರು. ಮಾಧ್ಯಮಗಳ ಮುಂದೆ ಸ್ವ ಇಚ್ಛೆಯಿಂದ ಪತ್ರ ಬರೆದಿರುವುದಾಗಿ ಹೇಳಿಸಿ ಮಠದಿಂದ ಹೊರ ಹಾಕಿದರು ಎಂದರು.
ನನ್ನ ಕೊಲೆಗೆ ವಿನಯ ಕುಲಕರ್ಣಿ ಸಂಚು ನಡೆಸಿದ್ದು, ಅದರಲ್ಲಿ ಮಠಾಧೀಶರೊಬ್ಬರು ಶಾಮೀಲಾಗಿದ್ದಾರೆ. ಸದ್ಭಕ್ತರು ನನ್ನನ್ನು ಕಾಪಾಡಬೇಕು. ಯಾವುದೇ ತಪ್ಪು ಮಾಡದ ನನಗೆ ಮತ್ತೆ ಮಠದ ಪೀಠಾಧಿಪತಿಯಾಗಲು ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ನಾನು ವಿಧಾನಸೌಧ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದರು.
ಅನೈತಿಕ ಸಂಬಂಧ ಹೊಂದಿರುವುದನ್ನು ಸಾಬೀತು ಪಡಿಸಿದರೆ ನಾನು ಜೀವನಪೂರ್ತಿ ವಿನಯ ಕುಲಕರ್ಣಿ ಮನೆಯಲ್ಲಿ ಜೀತವಿರುತ್ತೇನೆ. ಒಂದು ವೇಳೆ ಆರೋಪ ಸಾಬೀತುಪಡಿಸಲು ವಿಫಲವಾದರೆ ಮಠದ ಪೀಠಾಧಿಪತಿ ಸ್ಥಾನ ನೀಡಬೇಕಲ್ಲದೇ ವಿನಯ ಕುಲಕರ್ಣಿ ಜೀವನ ಪೂರ್ತಿ ಮಠದಲ್ಲಿ ನನ್ನ ಸೇವೆ ಮಾಡಿಕೊಂಡಿರಬೇಕು.
– ಶ್ರೀ ಶಿವಯೋಗಿ ಸ್ವಾಮೀಜಿ, ಧಾರವಾಡ ಮುರುಘಾಮಠದ ಹಿಂದಿನ ಪೀಠಾಧಿಪತಿ