Advertisement

ಸೇಡು ತೀರಿಸಿಕೊಂಡ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್‌

02:10 PM May 16, 2018 | Team Udayavani |

ನಂಜನಗೂಡು: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಇದೇ ಪ್ರಥಮ ಬಾರಿಗೆ ಕಮಲ ಅರಳಿ ಇತಿಹಾಸ ಸೃಷ್ಟಿಸಿದೆ. ಮಾಜಿ ಸಚಿವ ಶ್ರೀನಿವಾಸ್‌ ಪ್ರಸಾದ್‌ ಅಳಿಯ ಹಾಗೂ ಮಾಜಿ ಸಚಿವ ದಿ| ಬಸವಲಿಂಗಪ್ಪ ಮೊಮ್ಮಗ ಹರ್ಷವರ್ಧನ್‌ ಬಿಜೆಪಿ ಅಭ್ಯರ್ಥಿಯಾಗಿ ಜಯ ಗಳಿಸಿದ್ದಾರೆ.

Advertisement

ವಿಧಾನಸಭಾ ಚುನಾವಣೆಯಲ್ಲಿ  ತಮ್ಮ ನೇರ ಪ್ರತಿಸ್ಪರ್ಧಿ ಹಾಗೂ ಹಾಲಿ ಶಾಸಕ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ಅವರನ್ನು 12,479 ಮತಗಳ ಅಂತರದಿಂದ ಪರಾಭವಗೊಳಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.

ಮತ ಎಣಿಕೆ ಮೊದಲನೇ ಸುತ್ತಿನಿಂದಲೇ ಹರ್ಷವರ್ಧನ ಮೇಲುಗೈ ಸಾಧಿಸುತ್ತ ಬಂದು, ಕೊನೆಯ ಸುತ್ತಿನವರೆಗೂ  ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಲೇ ಬಂದಿದ್ದು, ಕೊನೆಗೆ 12 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ವಿಜಯ ಸಾಧಿಸಿದರು.

ಸೇಡು ತೀರಿಸಿಕೊಂಡ ಪ್ರಸಾದ್‌: ಕಳೆದ ವರ್ಷ ನಡೆದ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್‌ನ ಅಧಿಕಾರದ ಅಬ್ಬರದಲ್ಲಿ ಸೋತು ಸುಣ್ಣವಾಗಿ ಗಾಯಗೊಂಡು ಹುಲಿಯಂತಾಗಿದ್ದ ಪ್ರಸಾದ್‌ ಈ ಬಾರಿ ತಮ್ಮ ಅಳಿಯನನ್ನು ಇಲ್ಲಿಂದ ಕಣಕ್ಕಿಳಿಸಿ ತಮ್ಮ ಸೇಡನ್ನು ತೀರಿಸಿಕೊಂಡಿದ್ದಾರೆ.

ಅಂದು ಸೋತು ಮೈಸೂರಿನ ಜಯಲಕ್ಷ್ಮೀಪುರದ ಮನೆ ಸೇರಿದ ಪ್ರಸಾದ ಅಂದಿನಿಂದಲೇ  ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪಹಾಗೂ ಸಂಸದ ಆರ್‌.ಧ್ರುವನಾರಾಯಣರ ವಿರುದ್ಧ ರಾಜಕೀಯವಾಗಿ ಸೇಡು ತೀರಿಸಿಕೊಳ್ಳಲು ರಾಜಕೀಯದ ವ್ಯೂಹಗಳನ್ನು ಹೆಣೆದಿದ್ದರು.

Advertisement

ವಿಧಾನಸಭಾ ಚುನಾವಣೆಯಲ್ಲಿ  ಈ ನಾಯಕರಿಗೆ ಪಾಠ ಕಲಿಸುವ ಶಪಥ ತೊಟ್ಟಿದ್ದ ಶ್ರೀನಿವಾಸ ಪ್ರಸಾದ್‌, ತಮ್ಮ ಭೀಮ ಸದನಕ್ಕೆ ಗ್ರಾಮೀಣ ಪ್ರದೇಶದ ಮುಖಂಡರನ್ನು ಕರೆಸಿಕೊಳ್ಳುತ್ತಲೇ ಈ ಚುನಾವಣಾ ಆಖಾಡದ ಖೆಡ್ಡ ರೂಪಿಸಲು  ಸಿದ್ದತೆ ನಡೆಸಿದ್ದರು.

ಬರುವ ಚುನಾವಣೆಯಲ್ಲಿ ಇವರ ಗತಿ ಏನಾಗುತ್ತೆ ಎಂದು ನೋಡುವಿರಿ ಎಂದು ಗುಟರು ಹಾಕುತ್ತಲೇ ಇದ್ದು ಈಗ ಸಿದ್ದರಾಮಯ್ಯ ಹಾಗೂ ಡಾ.ಎಚ್‌.ಸಿ.ಮಹದೇವಪ್ಪ ಸೋಲಿನ ಮಧ್ಯೆ ತಮ್ಮ ಅಳಿಯನನ್ನು ಗೆಲ್ಲಿಸಿಕೊಳ್ಳುವದರ ಮೂಲಕ ಉಪ ಚುನಾವಣೆಯ ಸೇಡು ತೀರಿಸಿಕೊಂಡಿದ್ದಾರೆ.

ಬಿಜೆಪಿಯ ಹರ್ಷವರ್ಧನ 78,030 ಮತ ಗಳಿಸಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಕಳಲೆ ಕೇಶವಮೂರ್ತಿ 65,551ಮತಗಳನ್ನು ಪಡೆದು 2ನೇ ಸ್ಥಾನದಲ್ಲಿದ್ದಾರೆ. ಇನ್ನು ಜೆಡಿಎಸ್‌ ಅಭ್ಯರ್ಥಿ ದಯಾನಂದಮೂರ್ತಿ 13,679 ಪಡೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next