ಗಂಗಾವತಿ: ಹಿಂದೂ ಧರ್ಮ ಮತ್ತು ದೇವರುಗಳು ಯಾವ ಪಕ್ಷ ಅಥವಾ ಸಂಘ-ಸಂಸ್ಥೆಗೆ ಸೇರಿದವಲ್ಲ, ಸರ್ವ ಹಿಂದೂಗಳಿಗೆ ಸೇರಿವೆ ಎಂದು ಮಾಜಿ ಸಚಿವ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದರು.
ಅವರು ಕಾರಟಗಿಯಲ್ಲಿ ಹನುಮಮಾಲೆ ವೃತದ ಕೇಸರಿ ಬಟ್ಟೆ ಧರಿಸಿ ವೃತಾಚರಣೆ ಮಾಡುವ ಸಂದರ್ಭ ಮಾತನಾಡಿದರು.
ಪ್ರತಿಯೊಬ್ಬರು ದೇವರ ಸನ್ನಿಧಿಗೆ ತೆರಳಿ ತಮ್ಮ ಕಷ್ಟಗಳನ್ನು ಆಚರಣೆ ಮೂಲಕ, ಮನವಿ ಮಾಡುವ ಮೂಲಕ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಬೇಕು. ದೇವರು ಮತ್ತು ಧರ್ಮ ಹಿಂದೂ ಜನರಲ್ಲಿ ದೈವಿ ಭಾವನೆ ಮೂಡಿಸುತ್ತದೆ. ಆದ್ದರಿಂದ ಧರ್ಮದ ಜೊತೆ ಹಿರಿಯರನ್ನು ಗೌರವಿಸುವ ಮತ್ತು ಧರ್ಮಾಚರಣೆ ಮಾಡುವ ಸಂಕಲ್ಪ ಹನುಮ ಮಾಲೆ ಕಲಿಸುತ್ತದೆ ಎಂದರು.
ಹನುಮಂತ ಯುವಕರ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿ ಯುವಕ ಹನುಮಾನ್ ಮಾಲೆ ಧರಿಸುವ ಮೂಲಕ ಒಳ್ಳೆಯ ಅಭ್ಯಾಸ ಕಲಿಯಬೇಕು. ದುಶ್ಚಟಗಳನ್ನು ಬಿಡಬೇಕು. ಬಿಜೆಪಿಯವರು ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದು, ಧರ್ಮಾಚರಣೆ ಪ್ರತಿ ಹಿಂದೂವಿನ ರಕ್ತದಲ್ಲಿದ್ದು ಅದನ್ನು ಬಿಜೆಪಿ ಅಥವಾ ಅನ್ಯರು ಹೇಳಿ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ತಾವು ಐದು ದಿನಗಳ ವೃತಾಚಣೆ ಮಾಡುತ್ತಿದ್ದು, ತನ್ನ ಜತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರೂ ಮಾಲೆ ಧರಿಸಿದ್ದು, ನಿತ್ಯವೂ ದೇವರ ಸ್ಮರಣೆ, ಧಾರ್ಮಿಕ ಆಚರಣೆಯ ಸಂಕಲ್ಪ ಮಾಡಲಾಗುತ್ತಿದೆ. ಏ.6 ರಂದು ಹನುಮಮಾಲಾ ವಿಸರ್ಜನೆಯನ್ನು ಕಿಷ್ಕಿಂಧಾ ಅಂಜನಾದ್ರಿಗೆ ತೆರಳಿ ಮಾಡಲಾಗುತ್ತದೆ. ಇದರಲ್ಲಿ ನಾವೆಂದೂ ಅನ್ಯ ಪಕ್ಷದವರಂತೆ ರಾಜಕೀಯ ಮಾಡುವುದಿಲ್ಲ. ಧರ್ಮವನ್ನು ಧರ್ಮಾಚರಣೆಯ ಮೂಲಕ ಮಾಡಲಾಗುತ್ತದೆ. ಲಾಭ ನಷ್ಟದಲ್ಲಿ ಮಾಡಬಾರು ಎಂದರು.
ಮಾಜಿ ಸಚಿವ ಶಿವರಾಜ್ ತಂಗಡಗಿ ಕಳೆದ 10 ವರ್ಷಗಳಿಂದ ಹನುಮಮಾಲೆ ಧರಿಸುತ್ತಿದ್ದು, ಸಹಪಾಠಿಗಳ ಜತೆ ಪಾದಯಾತ್ರೆ ಮೂಲಕ ತೆರಳಿ ಹನುಮಮಾಲೆ ವಿಸರ್ಜನೆ ಮಾಡುತ್ತಾರೆ.