ಬೆಂಗಳೂರು: ಜನತಾ ಪರಿವಾರದ ಹಿರಿಯ ಮುಖಂಡ ಪಿಜಿಆರ್ ಸಿಂಧ್ಯಾ ಜೆಡಿಎಸ್‌ಗೆ “ಘರ್ ವಾಪ್ಸಿ’ ಆಗಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ದೇವೇಗೌಡರ ಮಾರ್ಗದರ್ಶನದಲ್ಲಿ ಚ್.ಡಿ.ಕುಮಾರಸ್ವಾಮಿ
ನಾಯಕತ್ವದಲ್ಲಿ ಶ್ರಮಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ದೇವೇಗೌಡರ ಜತೆಗೂಡುತ್ತೇನೆ ಎಂದು ಹೇಳುವ ಮೂಲಕ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಸಿಂಧ್ಯಾ ಅವರನ್ನು ಸಕ್ರಿಯ ರಾಜಕಾರಣಕ್ಕೆ ಸ್ವಾಗತಿಸಿದ ಜೆಡಿಎಸ್ ರಾಷ್ಟ್ರೀಯ ಆಧ್ಯಕ್ಷ ಎಚ್ .ಡಿ.ದೇವೇಗೌಡರು ಸಹ “ಸಿಂಧ್ಯಾ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಕೈಗೊಂಡು ನಂತರ ರಾಷ್ಟ್ರ ರಾಜಕರಣದಲ್ಲಿ ನನ್ನ ಜತೆಗೂಡಲಿದ್ದಾರೆ’ ಎಂದು ತಿಳಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ ವರುಣಾ ಕ್ಷೇತ್ರದಿಂದ ಸಿಂಧ್ಯಾ ಸ್ಪರ್ಧೆ ಮಾಡುತ್ತಾರೆ ಎಂಬುದು ಊಹಾಪೂಹ. ಪಕ್ಷದ ಸಂಘಟನೆಯಲ್ಲಿ ಅವರು ತೊಡಗಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮೂಲಗಳ ಪ್ರಕಾರ ಬೆಂಗಳೂರು ಗ್ರಾಮಾಂತರ ಲೋಕಸಭೆ ಅಥವಾ ಮುಂಬೈ ಕರ್ನಾಟಕ ಭಾಗದ ಯಾವುದಾದರೂ ಕ್ಷೇತ್ರದಿಂದ ಸಿಂಧ್ಯಾ ಅವರನ್ನು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಬಹುದು. ಇಲ್ಲವೇ ರಾಜ್ಯ
ವಿಧಾನಪರಿಷತ್ ಅಥವಾ ರಾಜ್ಯಸಭೆಗೆ ಕಳುಹಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಸಂತಸ: ಸಕ್ರಿಯ ರಾಜಕಾರಣಕ್ಕೆ ಮರಳುತ್ತಿರುವ ಬಗ್ಗೆ ಮಾತನಾಡಿದ ಪಿ.ಜಿ.ಆರ್.ಸಿಂಧ್ಯಾ, “ಜನತಾ ಪರಿವಾರದಲ್ಲಿ ದೇವೇಗೌಡರ ಜತೆಯಲ್ಲಿದ್ದವನು. ಈ ವಯಸ್ಸಿನಲ್ಲಿ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಬಲಪಡಿಸಲು ಅವರು ಶ್ರಮಿಸುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿಯವರು ಅನಾರೋಗ್ಯದ ನಡುವೆಯೂ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಅವರ ಜತೆಗೂಡಲು ಗೌಡರ ಆಹ್ವಾನದ ಮೇರೆಗೆ ಒಪ್ಪಿದ್ದೇನೆ. ನಾನು ಯಾವುದೇ ಸ್ಥಾನಮಾನದ ಬೇಡಿಕೆ ಇಟ್ಟಿಲ್ಲ’ ಎಂದು ಹೇಳಿದರು. ಇದೇ ವೇಳೆ ಮಾಜಿ ಸಚಿವ ಜೀವಿಜಯ ನೇತೃತ್ವದಲ್ಲಿ ಕೊಡಗು ಜಿಲ್ಲೆಯ 150 ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡರು.