ಗಂಗಾವತಿ : ಮಾಜಿ ಸಚಿವರು ಮತ್ತು ಕಾಂಗ್ರೆಸ್ ನ ಯುವ ಮುಖಂಡ ಪ್ರಿಯಾಂಕ್ ಖರ್ಗೆ ಬಗ್ಗೆ ಆಕ್ಷೇಪಾರ್ಹ ಶಬ್ದಗಳಲ್ಲಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ ಸಂಸದನಾಗಲು ನಾಲಾಯಕ್ ಆಗಿದ್ದಾರೆ. ಪ್ರಚಾರದ ತೆವಲಿಗಾಗಿ ಕಾಂಗ್ರೆಸ್ನ ಹಿರಿಯ ಮುಖಂಡರು ಮತ್ತು ಎಐಸಿಸಿ ಮುಖಂಡರನ್ನು ಏಕವಚನದಲ್ಲಿ ಮಾತನಾಡುವ ಪ್ರತಾಪ್ ಸಿಂಹ ಮೊದಲಿಗೆ ಸಂಸ್ಕಾರವನ್ನು ಕಲಿಯಲಿ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ .
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ , ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಹಿರಿಯ ಮುಖಂಡರ ಬಗ್ಗೆ ಏಕವಚನದಲ್ಲಿ ಮಾತನಾಡಿ ಪ್ರಚಾರದ ತೆವಲಿನಲ್ಲಿ
ಮಾಧ್ಯಮಗಳಲ್ಲಿ ಮಿಂಚುವ ಪ್ರತಾಪ್ ಸಿಂಹ ಮೊದಲು ಹಿರಿಯರಿಗೆ ಗೌರವ ಕೊಡುವುದನ್ನು ಕಲಿಯಲಿ. ಪ್ರಿಯಾಂಕ್ ಖರ್ಗೆ ಹೆಣ್ಣೋ ಗಂಡೋ ಎಂದು ಹೇಳುವ ಪ್ರತಾಪ ಸಿಂಹ ತಾವು ಏನೆಂದು ಮೊದಲು ಹೇಳಲಿ. ಯಾರದ್ದೋ ಗಾಳಿಯಲ್ಲಿ ಗೆದ್ದುಬಂದಿರುವ ಪ್ರತಾಪ್ ಸಿಂಹ ದೊಡ್ಡವರ ಬಗ್ಗೆ ಇನ್ನಿಲ್ಲದಂತೆ ವಯಸ್ಸಿಗೂ ಮೀರಿ ಮಾತನಾಡುವುದನ್ನು ಬಿಡಲಿ. ಬಿಟ್ ಕಾಯಿನ್ ಪ್ರಕರಣದಲ್ಲಿ ಬಿಜೆಪಿ ನಾಯಕರೇ ಅತಿಹೆಚ್ಚು ಪಾಲ್ಗೊಂಡಿದ್ದು ಈ ಪ್ರಕರಣ ಅತ್ಯಂತ ಮಹತ್ವದ್ದಾಗಿದೆ. ಈ ಮಹತ್ವವನ್ನ ಕಡಿಮೆಮಾಡಲು ಪ್ರತಾಪ್ ಸಿಂಹ ಸೇರಿ ಬಿಜೆಪಿಯ ನಾಯಕರು ಇನ್ನಿಲ್ಲದಂತೆ ಕಾಂಗ್ರೆಸ್ ಮೇಲೆ ಮುಗಿಬೀಳುತ್ತಿದ್ದಾರೆ. ಪ್ರಿಯಾಂಕ ಖರ್ಗೆ ಸೇರಿ ಕಾಂಗ್ರೆಸ್ ಮುಖಂಡರಿಗೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ.
ಕೂಡಲೇ ಸರ್ಕಾರ ಬಿಟ್ ಕಾಯಿನ್ ಪ್ರಕರಣದಲ್ಲಿ ಪಾಲ್ಗೊಂಡಿರುವ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಿ. ಪ್ರಧಾನಿ ಅಮೇರಿಕಾಕ್ಕೆ ಹೋದ ಸಂದರ್ಭದಲ್ಲಿ ಮತ್ತು ವಿದೇಶಿ ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಅಲ್ಲಿಯ ಮಾಧ್ಯಮಗಳು ಪ್ರಧಾನಿಗಳಿಗೆ ಮುಜುಗರವಾಗುವಂತಹ ಪ್ರಶ್ನೆಗಳನ್ನು ಕೇಳಿದ್ದಾರೆ. ಜೊತೆಗೆ ಪ್ರಧಾನ ಮಂತ್ರಿ ಕಚೇರಿಗೆ ಹಲವಾರು ಪತ್ರಗಳು ಬಿಟ್ ಕಾಯಿನ್ ಪ್ರಕರಣದ ಕುರಿತು ಬಂದಿವೆ. ಕೂಡಲೇ ಸರ್ಕಾರ ಮತ್ತು ಇಡಿ ಸಿಬಿಐ ಬಿಟ್ ಕಾಯಿನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಮುಂಬರುವ ಚುನಾವಣೆಗಳಲ್ಲಿ ಪ್ರತಾಪ್ ಸಿಂಹರಂತಹ ಅರ್ಧಂ ಬರ್ಧ ತಿಳಿದುಕೊಂಡಿರುವ ನಾಯಕರಿಗೆ ಮತದಾರರು ಬುದ್ಧಿ ಕಲಿಸಲಿದ್ದಾರೆಂದು ಅನ್ಸಾರಿ ಆಕ್ರೋಶ ವ್ಯಕ್ತಪಡಿಸಿದರು.