Advertisement

ನಾಗಮಂಗಲದಲ್ಲಿ ಜನಪರ ಕೆಲಸವಾಗಿಲ್ಲ

03:24 PM Jan 14, 2023 | Team Udayavani |

ನಾಗಮಂಗಲ: ಕಳೆದ ಐದು ವರ್ಷಗಳಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಯಾವುದೇ ಜನಪರ ಕೆಲಸಗಳು ತಾಲೂಕಿನಲ್ಲಿ ನಡೆದಿಲ್ಲ ಎಂದು ಮಾಜಿ ಸಚಿವ ಚಲುವರಾಯ ಸ್ವಾಮಿ ಆರೋಪಿಸಿದರು.

Advertisement

ತಾಲೂಕಿನ ಭೈರಸಂದ್ರ ಗ್ರಾಮದ ಶ್ರೀಹದ್ದಿಕಲ್ಲು ಹನುಮಂತರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ನಡೆದ ಕಾಳಿಂಗನಹಳ್ಳಿ ಗ್ರಾಪಂ ವ್ಯಾಪ್ತಿಯ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಮತ್ತು ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ರೀತಿಯ ಸೌಲಭ್ಯ ಸಿಗುತ್ತವೆ. ಹೀಗಾಗಿ, ರಾಜ್ಯ ಹಾಗೂ ರಾಷ್ಟ್ರಕ್ಕೆ ಕಾಂಗ್ರೆಸ್‌ ಅನಿವಾರ್ಯ. ಕಳೆದ 3 ಬಾರಿ ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳು ಜನರ ಕಣ್ಣ ಮುಂದಿವೆ. ಆದರೆ, ನನ್ನ ವಿರುದ್ಧ ಎರಡು ಬಾರಿ ಗೆದ್ದು ಶಾಸಕರಾಗಿರುವವರು ಕ್ಷೇತ್ರದಲ್ಲಿ ಯಾವುದಾದರೊಂದು ಶಾಶ್ವತವಾದ ಅಭಿವೃದ್ಧಿ ಕೆಲಸ ಮಾಡಿದ್ದರೆ, ಅದನ್ನು ವೇದಿಕೆಯಲ್ಲಿ ನಿಂತು ಹೇಳಲಿ ಎಂದು ಸವಾಲು ಹಾಕಿದರು.

ಶಾಸಕರ ಪರಿಶ್ರಮವಿಲ್ಲ: ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಲೂಕಿನ ಹೇಮಾವತಿ ನಾಲಾ ಅಗಲೀಕರಣಕ್ಕೆ 250 ಕೋಟಿ ಅನುದಾನ ಬಿಡುಗಡೆ ಮಾಡದಿದ್ದರೆ, ಇಂದು ತಾಲೂಕಿನ ಹಲವು ಕೆರೆಕಟ್ಟೆಗಳು ಪೂರ್ಣಪ್ರಮಾಣದಲ್ಲಿ ಭರ್ತಿಯಾಗುತ್ತಿರಲಿಲ್ಲ. ನಾಲಾ ಆಧುನೀಕರಣದ ಜೊತೆಗೆ ಈ ಬಾರಿ ಉತ್ತಮ ಮಳೆಯಾದ ಕಾರಣದಿಂದ ಎಲ್ಲ ಕೆರೆಕಟ್ಟೆಗಳೂ ಸಹ ತುಂಬಿವೆ. ಕೆರೆಕಟ್ಟೆಗಳನ್ನು ತುಂಬಿಸುವಲ್ಲಿ ಈಗಿನ ಶಾಸಕರ ಯಾವುದೇ ಪರಿಶ್ರಮವಿಲ್ಲ ಎಂದು ಹೇಳಿದರು.

ಕಳೆದ ಚುನಾವಣೆಯಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಪರವಾಗಿ ಇಲ್ಲಿ ಒಬ್ಬರನ್ನು ಗೆಲ್ಲಿಸಿದ್ದಕ್ಕೆ ಕ್ಷೇತ್ರಕ್ಕೆ ಯಾವ ಪ್ರಯೋಜನವಾಗಿದೆ ಎಂದು ಪ್ರಶ್ನಿಸಿದ ಅವರು, ಮಾರ್ಕೋನಹಳ್ಳಿ ಜಲಾಶಯದಿಂದ ತಾಲೂಕಿನ 128 ಹಳ್ಳಿಗಳಿಗೆ ಶುದ್ಧ ನೀರು ಪೂರೈಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಆರಂಭಗೊಂಡು 5ವರ್ಷ ಕಳೆದರೂ ಅದಕ್ಕೆ ಚಾಲನೆ ಕೊಡಿಸಲಾಗದವರಿಗೆ, ಹೊಸ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವೇ ಎಂದು ಟೀಕಿಸಿದರು.

ಕೆಲಸ ಮಾಡಿ ತೋರಿಸುತ್ತೇನೆ: ಕ್ಷೇತ್ರದ ಜನರಿಂದ ಆಶೀರ್ವಾದ ಪಡೆದು ಈ ಹಿಂದೆ ನಾನು ಶಾಸಕ, ಸಚಿವ ಹಾಗೂ ಸಂಸದನಾಗಿದ್ದ ಅವಧಿಯಲ್ಲಿ ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈಗ ಮತ್ತೆ ಚಲುವರಾಯ ಸ್ವಾಮಿಯೇ ಬೇಕೆಂದು ನೀವು ತೆಗೆದುಕೊಂಡಿರುವ ನಿರ್ಧಾರವನ್ನು ನೋಡಿದರೆ, ನಾನು ಬೇರೆ ಕ್ಷೇತ್ರಕ್ಕೆ ಹೋಗುವ ಅಗತ್ಯವಿಲ್ಲ. ನಿಮ್ಮ ಮೇಲೆ ನನಗೆ ನಂಬಿಕೆ, ಭರವಸೆಯಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ನಮ್ಮದೇ ಸರ್ಕಾರದಲ್ಲಿ ನಾನು 5 ವರ್ಷ ಮಂತ್ರಿಯಾಗಿರುತ್ತೇನೆ. ಆ ಅವಧಿಯಲ್ಲಿ ಮುಂದಿನ 50 ವರ್ಷಗಳಿಗೆ ಆಗುವಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬೃಹತ್‌ ಬೈಕ್‌ರ್ಯಾಲಿ: ಸಭೆ ಹಿನ್ನಲೆಯಲ್ಲಿ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ತಾಲೂಕಿನ ಗಡಿ ಗ್ರಾಮ ಗೊಂದಿಹಳ್ಳಿಯಿಂದ ಗರುಡನಹಳ್ಳಿ, ಬಿಳಗುಂದ, ಬೆಟ್ಟದಕೋಟೆ ಮಾರ್ಗವಾಗಿ ಭೈರಸಂದ್ರದ ವರೆಗೂ ಬೃಹತ್‌ ಬೈಕ್‌ ರ್ಯಾಲಿ ನಡೆಸಿದರು. ರ್ಯಾಲಿಯಲ್ಲಿ ಆಗಮಿಸಿದ ಎನ್‌.ಚಲುವರಾಯ ಸ್ವಾಮಿ ಹದ್ದಿನಕಲ್ಲು ಹನುಮಂತರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಪಕ್ಷ ಸೇರ್ಪಡೆ: ಕಾಳಿಂಗನಹಳ್ಳಿ ಗ್ರಾಪಂ ವ್ಯಾಪ್ತಿಯ ಜೆಡಿಎಸ್‌ ಕಾರ್ಯಕರ್ತರು ಪಕ್ಷ ತೊರೆದು ಮಾಜಿ ಸಚಿವ ಚಲುವರಾ ಯಸ್ವಾಮಿ ಸಮ್ಮುಖದಲ್ಲಿ ಕಾಂಗ್ರೆಸ್‌ ಗೆ ಸೇರ್ಪಡೆಯಾದರು. ಚಲುವರಾಯಸ್ವಾಮಿ ಪುತ್ರ ಸಚ್ಚಿನ್‌, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಜು ಗೌಡ, ತಾಪಂ ಮಾಜಿ ಅಧ್ಯಕ್ಷ ಮೂಡ್ಲಿಗೌಡ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ದಿನೇಶ್‌, ಜಿಪಂ ಮಾಜಿ ಸದಸ್ಯರಾದ ಕಂಚನಹಳ್ಳಿ ಬಾಲು, ಸುರೇಶ್‌, ಮುಖಂಡರಾದ ಪಾಪಣ್ಣ, ವಡೇರಹಳ್ಳಿ ಬಾಬು, ರಘು, ಸತ್ಯಣ್ಣ, ಸುನಿಲ್‌ ಲಕ್ಷ್ಮೀಕಾಂತ್‌, ಸಂಪತ್‌, ರಮೇಶ್‌, ಅಶೋಕ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next