ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದ ಕೆ. ಅಣ್ಣಾಮಲೈ ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ದಿಲ್ಲಿಯ ಬಿಜೆಪಿ ರಾಷ್ಟ್ರೀಯ ಕಚೇರಿಯಲ್ಲಿ ಈ ಸಂದರ್ಭ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ರಾಷ್ಟ್ರೀಯವಾದಿ ಪಕ್ಷ ಹೀಗಾಗಿ, ನಾನು ಬಿಜೆಪಿ ಸೇರಿದ್ದೇನೆ. ನಾನು ಯಾವುದೇ ಬೇಡಿಕೆ ಇಟ್ಟು ಬಂದಿಲ್ಲ. ಸಮಾಜ ಸೇವೆ ಮಾಡಬೇಕು ಎಂದು ಬಂದಿದ್ದೇನೆ ಎಂದು ಹೇಳಿದರು.
ಪೊಲೀಸ್ ಇಲಾಖೆಗಿಂತ ರಾಜಕೀಯದಲ್ಲಿ ಸಮಾಜ ಸೇವೆ ಮಾಡಬಹುದು. ಈಗಿರುವ ಬಹುತೇಕ ಪಕ್ಷಗಳು ಕುಟುಂಬಗಳಿಗೆ ಸೀಮಿತ ವಾಗಿವೆ. ಹೀಗಾಗಿ, ಜನರ ಹಿತ ಬಯಸುವ ಬಿಜೆಪಿ ಪಕ್ಷ ಸೇರಿದ್ದೇನೆ. ಮೋದಿಯವರ ಕಾರ್ಯವೈಖರಿ ನನಗೆ ಇಷ್ಟ ಎಂದು ತಿಳಿಸಿದರು.
ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ಬೇಕಿದೆ. ಆಲ್ಲಿ ದ್ರಾವಿಡ ಸಂಸ್ಕೃತಿ ದಟ್ಟವಾಗಿದ್ದರೂ ಬಿಜೆಪಿಗೆ ಭವಿಷ್ಯ ಇದೆ ಎನಿಸುತ್ತದೆ ಎಂದು ಹೇಳಿದರು.
ಪಕ್ಷ ಸೇರ್ಪಡೆ ಅನಂತರ ತಮಿಳುನಾಡು ಬಿಜೆಪಿ ಘಟಕದ ಅಧ್ಯಕ್ಷ ಡಾ| ಎಲ್. ಮುರುಗನ್ ಜತೆಗೂಡಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.