Advertisement

ಅತ್ಯಾಚಾರ ಪ್ರಕರಣ: ಮಾಜಿ ಸಚಿವ ಹರತಾಳು ಹಾಲಪ್ಪ ನಿರಾಳ

06:15 AM Aug 18, 2017 | Team Udayavani |

ಶಿವಮೊಗ್ಗ: ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಮಾಜಿ ಸಚಿವ ಹರತಾಳು ಹಾಲಪ್ಪರನ್ನು ಆರೋಪ ಮುಕ್ತಗೊಳಿಸಿ ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.

Advertisement

ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಹಾಲಪ್ಪ ಅವರನ್ನು ಆರೋಪ ಮುಕ್ತಗೊಳಿಸುತ್ತಿರುವುದಾಗಿ ನ್ಯಾಯಾಧೀಶರಾದ ಬಿ.ಜಿ. ರಮಾ ತೀರ್ಪಿನಲ್ಲಿ ತಿಳಿಸಿದ್ದಾರೆ.

ಇದರೊಂದಿಗೆ ಕಳೆದ ಏಳೂವರೆ ವರ್ಷಗಳಿಂದ ಹರತಾಳು ಹಾಲಪ್ಪ ಅವರು ಎದುರಿಸುತ್ತಿದ್ದ ಅತ್ಯಾಚಾರ ಪ್ರಕರಣ ತಾರ್ಕಿಕ ಅಂತ್ಯ ಕಂಡಿದ್ದು, ಬೆನ್ನಲ್ಲೇ ಇವರ ರಾಜಕೀಯ ಜೀವನದ ಹಾದಿ ಸುಗಮವಾದಂತಾಗಿದೆ.

ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರಾಗಿದ್ದ ಹರತಾಳು ಹಾಲಪ್ಪ, ಶಿವಮೊಗ್ಗ ನಗರದ ವಿನೋಬನಗರದಲ್ಲಿ ವಾಸಿಸುತ್ತಿದ್ದ ತಮ್ಮ ಸ್ನೇಹಿತ ವೆಂಕಟೇಶ್‌ಮೂರ್ತಿ ಎಂಬುವವರ ಪತ್ನಿಯ ಮೇಲೆ 2009 ರ ನ. 26 ರಂದು ಅತ್ಯಾಚಾರ ನಡೆಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ 2010ರ ಮೇ ತಿಂಗಳಲ್ಲಿ ಈ ಕುರಿತು ಅಧಿಕೃತವಾಗಿ ದೂರು ದಾಖಲಾಗಿತ್ತು.

ತಮ್ಮ ಮನೆಗೆ ಭೋಜನಕ್ಕೆಂದು ಆಗಮಿಸಿದ್ದ ಹಾಲಪ್ಪ ಅವರು ಔಷಧ ತರಲೆಂದು ತನ್ನನ್ನು ಮನೆಯಿಂದ ಹೊರಗೆ ಕಳುಹಿಸಿ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ವೆಂಕಟೇಶ್‌ಮೂರ್ತಿ ಆರೋಪಿಸಿದ್ದರು. ಈ ಕುರಿತಂತೆ ಶಿವಮೊಗ್ಗದ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಹಾಲಪ್ಪ ವಿರುದ್ಧ ದೂರು ದಾಖಲಾಗಿತ್ತು.

Advertisement

ಪ್ರಕರಣ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು. ಅಲ್ಲದೆ, ಅಂದಿನ ಬಿಜೆಪಿ ಸರ್ಕಾರಕ್ಕೆ ಸಾಕಷ್ಟು ಇರಿಸು ಮುರುಸು ಉಂಟು ಮಾಡಿತ್ತು. ಆರೋಪ ಹೊತ್ತ ಹಾಲಪ್ಪ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು.

ಹಾಲಪ್ಪ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಹಾಜರುಪಡಿಸಿದ್ದರು. ಕಾರಾಗೃಹಕ್ಕೆ ಕರೆದೊಯ್ಯುತ್ತಿದ್ದ ವೇಳೆ ಹಾಲಪ್ಪನವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರಿ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೈಕೋರ್ಟ್‌ನಲ್ಲಿ ಹಾಲಪ್ಪನವರಿಗೆ ಜಾಮೀನು ಮಂಜೂರಾಗಿತ್ತು.

ಈ ಪ್ರಕರಣದ ಕುರಿತಂತೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುದೀರ್ಘ‌ ವಿಚಾರಣೆ ನಡೆದಿತ್ತು. ಇತ್ತೀಚೆಗೆ ವಾದ – ಪ್ರತಿವಾದ ಪೂರ್ಣಗೊಂಡಿದ್ದು, ಆ. 8 ರಂದು ಅಂತಿಮ ತೀರ್ಪು ಪ್ರಕಟವಾಗಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಹರತಾಳು ಹಾಲಪ್ಪ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ ನ್ಯಾಯಾಧೀಶರು ಆ. 17 ಕ್ಕೆ ತೀರ್ಪು ಪ್ರಕಟಿಸುವುದಾಗಿ ಆದೇಶಿಸಿದ್ದರು. ಅದರಂತೆ ಗುರುವಾರ ಬೆಳಗ್ಗೆ ಹಾಲಪ್ಪ ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಧೀಶರು ಸಂಜೆ 5 ಗಂಟೆಗೆ ತೀರ್ಪು ನೀಡುವುದಾಗಿ ಪ್ರಕಟಿಸಿದರು.

ನ್ಯಾಯಾಧೀಶರು ತೀರ್ಪು ಪ್ರಕಟಿಸುತ್ತಿದ್ದಂತೆ ಹರತಾಳು ಹಾಲಪ್ಪ ಮುಖದಲ್ಲಿ ನಿರಾಳತೆಯ ಭಾವ ಕಂಡುಬಂತು. ನ್ಯಾಯಾಧೀಶರಿಗೆ ಕೈ ಮುಗಿದು ನ್ಯಾಯಾಲಯ ಆವರಣದಿಂದ ಹೊರಬಂದ ಅವರನ್ನು ಅಭಿನಂದಿಸಲು ಬೆಂಬಲಿಗರು ಮುಗಿಬಿದ್ದರು. ಈ ತೀರ್ಪಿನಿಂದ ಹಾಲಪ್ಪರ ರಾಜಕೀಯ ಹಾದಿ ಸುಗಮವಾದಂತಾಗಿದೆ.

ತಮ್ಮ ಮೇಲೆ ಹೊರಿಸಿದ್ದ ಆರೋಪ ಸತ್ಯಕ್ಕೆ ದೂರವಾದುದು ಎಂಬುದು ಇದೀಗ ಸಾಬೀತಾಗಿದ್ದು, ಸತ್ಯಕ್ಕೆ ಜಯ ಸಿಕ್ಕಿದೆ. ತಮ್ಮ ವಿರುದ್ಧ ನಡೆಸಿದ ರಾಜಕೀಯ ಷಡ್ಯಂತ್ರವಿದು. ಈ ರಾಜಕೀಯ ಪಿತೂರಿಯನ್ನು ಇಷ್ಟರಲ್ಲಿಯೇ ಬಹಿರಂಗಪಡಿಸುತ್ತೇನೆ.
– ಹರತಾಳು ಹಾಲಪ್ಪ, ಮಾಜಿ ಸಚಿವ

ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಆರೋಪ ಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಇದರಿಂದ ತಮ್ಮ ಕಕ್ಷಿದಾರನಿಗೆ ನ್ಯಾಯ ದೊರಕಿದೆ .
– ಅಶೋಕ್‌ ಜಿ. ಭಟ್‌, ಹಾಲಪ್ಪ ಪರ ವಕೀಲ

Advertisement

Udayavani is now on Telegram. Click here to join our channel and stay updated with the latest news.

Next