Advertisement

ರಾಷ್ಟ್ರೀಯ ಕಬಡ್ಡಿ ಆಟಗಾರ್ತಿಗೆ ಹಲ್ಲೆ ಆರೋಪ: ಮಾಜಿ ಕಬಡ್ಡಿ ಆಟಗಾರ ಬಿ.ಸಿ ರಮೇಶ್ ಬಂಧನ

12:59 PM Jan 23, 2020 | keerthan |

ಬೆಂಗಳೂರು: ಭಾರತ ತಂಡದ ಕಬಡ್ಡಿ ಆಟಗಾರ್ತಿ ಉಷಾರಾಣಿ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜುನ ಪ್ರಶಸ್ತಿ ವಿಜೇತ ಮಾಜಿ ಕಬಡ್ಡಿ ಆಟಗಾರ ಬಿ.ಸಿ ರಮೇಶ್‌ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಉಷಾರಾಣಿ ಅವರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ಬಿ.ಸಿ ರಮೇಶ್‌, ರಾಜ್ಯ ಕಬಡ್ಡಿ ಸಂಸ್ಥೆ ಕಾರ್ಯದರ್ಶಿ ಮುನಿರಾಜು, ತರಬೇತುದಾರರಾದ ನರಸಿಂಹ, ಷಣ್ಮುಗಂ ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆರೋಪಿ ರಮೇಶ್‌ಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಸಂಪಂಗಿ ರಾಮನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಹಳೆ ವೈಷಮ್ಯ ಹಿನ್ನೆಲೆಯಲ್ಲಿ ಬಿ.ಸಿ ರಮೇಶ್‌ ಹಾಗೂ ಇತರ ಆರೋಪಿಗಳು ಮಂಗಳವಾರ ಕಂಠೀರವ ಸ್ಟೇಡಿಯಂನ ತಮ್ಮ ಕೊಠಡಿಗೆ ಕರೆಸಿ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಉಷಾ ರಾಣಿ ದೂರಿನಲ್ಲಿ ಆರೋಪಿಸಿ ದೂರು ನೀಡಿದ್ದಾರೆ. ಉಷಾರಾಣಿ ಕೂಡ ಹಲ್ಲೆ ನಡೆಸಿದ್ದಾರೆ ಎಂದು ರಮೇಶ್‌ ಕೂಡ ಪ್ರತಿದೂರು ನೀಡಿದ್ದಾರೆ. ಉಷಾರಾಣಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಚೇತರಿಸಿಕೊಂಡ ಬಳಿಕ ಅವರಿಂದ ಅಧಿಕೃತ ಹೇಳಿಕೆ ದಾಖಲಿಸಿಕೊಳ್ಳಲಾಗುವುದು.

ಯಾವ ನಿರ್ದಿಷ್ಟ ಕಾರಣಕ್ಕೆ ಜಗಳ ನಡೆದಿದು, ಹೊಡೆದಾಟ ನಡೆದಿದೆ ಎಂಬುದು ತನಿಖೆಯ ಬಳಿಕ ಸ್ಪಷ್ಟನೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. “ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಲಾಗಿದೆ. ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಉಷಾರಾಣಿ ಅವರ ವಿರುದ್ಧವೂ ರಮೇಶ್‌ ದೂರು ದಾಖಲಿಸಿದ್ದಾರೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಚೇತನ್‌ ಸಿಂಗ್‌ ರಾಥೋಡ್‌ ತಿಳಿದ್ದಾರೆ.

ಏನಿದು ಗಲಾಟೆ?
ಕಂಠೀರವ ಸ್ಟೇಡಿಯಂನಲ್ಲಿ ಕಿರಿಯ ಆಟಗಾರ್ತಿಯರ ಕಬಡ್ಡಿ ಶಿಬಿರ ನಡೆಯುತ್ತಿದ್ದು ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಅತಿಥಿಯಾಗಿ ಹೋಗಿದ್ದು ಆಟಗಾರ್ತಿಯರಿಗೆ ಉಷಾ ರಾಣಿ ಪರಿಚಯಿಸಿ ಕೊಟ್ಟಿದ್ದರು. ಈ ವೇಳೆ ರಾಜ್ಯ ಕಬಡ್ಡಿ ಸಂಸ್ಥೆ ಸಂಘಟನಾ ಕಾರ್ಯದರ್ಶಿಯೂ ಆಗಿರುವ ಬಿ.ಸಿ ರಮೇಶ್‌ ಅಲ್ಲಿರಲಿಲ್ಲ ಎನ್ನಲಾಗಿದೆ. ತಮ್ಮ ಅನುಪಸ್ಥಿತಿಯಲ್ಲಿ ಪೊಲೀಸ್‌ ಅಧಿಕಾರಿಯನ್ನು ಆಟಗಾರ್ತಿಯರಿಗೆ ಪರಿಚಯಿಸಿಕೊಟ್ಟಿದ್ದಕ್ಕೆ ರಮೇಶ್‌, ಉಷಾರಾಣಿ ಮೇಲೆ ಸಿಟ್ಟು ಮಾಡಿಕೊಂಡಿದ್ದರು. ಈ ವಿಚಾರವನ್ನು ಪ್ರಶ್ನಿಸಿ
ದ್ದರು. ಇದೇ ವಿಚಾರಕ್ಕೆ ಮಂಗಳವಾರ ಸಂಜೆ ಕೊಠಡಿಗೆ ಬರುವಂತೆ ಹೇಳಿ ಪ್ರಶ್ನಿಸಿದಾಗ ಇಬ್ಬರ ನಡುವೆ ಜಗಳ ನಡೆದಿದ್ದು, ರಮೇಶ್‌ ಹಾಗೂ ಇತರ ಆರೋಪಿಗಳು ಉಷಾ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

Advertisement

ಉಷಾರಾಣಿ ಹಿನ್ನೆಲೆ
ಭಾರತ ಮಹಿಳಾ ಕಬಡ್ಡಿ ತಂಡದ ಆಟಗಾರ್ತಿ ಆಗಿರುವ ಉಷಾರಾಣಿ (31)ಅವರು ಏಷ್ಯನ್‌ ಗೇಮ್ಸ್‌ನ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಅವರು ಕರ್ನಾಟಕ ಪೊಲೀಸ್‌ ಇಲಾಖೆಯಲ್ಲಿ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಮಾಜಿ ಕಬಡ್ಡಿ ಆಟಗಾರ ಆಗಿರುವ ಬಿ.ಸಿ ರಮೇಶ್‌ ಅರ್ಜುನ ಪ್ರಶಸ್ತಿ ಪುರಸ್ಕೃತರು, ಏಷ್ಯನ್‌ ಗೇಮ್ಸ್‌ ಚಿನ್ನದ ಪದಕ ವಿಜೇತರು. ಅಷ್ಟೇ ಅಲ್ಲದೆ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್‌, ಪುನೇರಿ, ಬೆಂಗಾಲ್‌ ತಂಡಗಳಿಗೆ ಕೋಚ್‌ ಆಗಿದ್ದರು. ಇವರ ಗರಡಿಯಲ್ಲಿ ಕಳೆದ ಆವೃತ್ತಿಯಲ್ಲಿ ಬೆಂಗಾಲ್‌ ಪ್ರೊ ಕಬಡ್ಡಿ ಚಾಂಪಿಯನ್‌ ಆಗಿತ್ತು.

ವಿಡಿಯೊ ಕುರಿತು ತನಿಖೆ!
ಘಟನೆ ಬಳಿಕ ರಮೇಶ್‌ ಹಾಗೂ ಉಷಾರಾಣಿ ನಡುವಿನ ಮಾತಿನ ಜಗಳದ ವಿಡಿಯೋ ಕೂಡ ವೈರಲ್‌ ಆಗಿದೆ. ವಿಡಿಯೋದಲ್ಲಿ ರಮೇಶ್‌ ವಿರುದ್ಧ ಉಷಾರಾಣಿ ಹಲವು ಆರೋಪಗಳನ್ನು ಮಾಡಿದ್ದಾರೆ. ಯಾವ ಕಾರಣಕ್ಕೆ ವಿಡಿಯೊ ಹರಿಬಿಡಲಾಗಿತ್ತು ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next