ಬೆಂಗಳೂರು: ಮಾಜಿ ಸಂಸದ ಕೋದಂಡರಾಮಯ್ಯ ಮತ್ತೆ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ.ಈ ಹಿಂದೆ ಜನತಾದಳದಲ್ಲಿದ್ದೇ ಕ್ಷೇತ್ರದ ಚಿತ್ರದುರ್ಗ ಸಂಸದರಾಗಿದ್ದ ಕೋದಂಡರಾಮಯ್ಯ ನಂತರ ಪಕ್ಷ ತ್ಯಜಿಸಿ ಸಿದ್ದರಾಮಯ್ಯನವರ ಎಬಿಪಿಜೆಡಿಯೊಂದಿಗೆ ಗುರುತಿಸಿಕೊಂಡು ನಂತರ ಕಾಂಗ್ರೆಸ್ ಸೇರಿದ್ದರು.
ಇತ್ತೀಚೆಗೆ ರಾಜಕೀಯ ಚಟುವಟಿಕೆಗಳಿಂದ ತಟಸ್ಥರಾಗಿದ್ದ ಕೋದಂಡರಾಮಯ್ಯ ಮತ್ತೆ ಜೆಡಿಎಸ್ ಸೇರಲು ಒಲವು ಹೊಂದಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಜತೆ ಸಮಾಲೋಚನೆ ನಡೆಸಿದ್ದಾರೆ. ಸದ್ಯದಲ್ಲೇ ಅವರು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೋದಂಡರಾಮಯ್ಯ ಅವರು ಜೆಡಿಎಸ್ ಸೇರಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತುಮಕೂರು ಅಥವಾ ಚಿತ್ರದುರ್ಗ ಜಿಲ್ಲೆಯ ಯಾವುದಾದರೊಂದು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆಯಿದೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆಯೂ ಒಲವು ಹೊಂದಿದ್ದು ಕ್ಷೇತ್ರದ ಆಯ್ಕೆ ಬಗ್ಗೆ ಆಪ್ತರು ಹಾಗೂ ಸಮುದಾಯದ ನಾಯಕರ ಜತೆ ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿದ್ದರೂ ತಟಸ್ಥವಾಗಿ ಉಳಿದಿರುವ ಜನತಾಪರಿವಾರದ ಮುಖಂಡರನ್ನು ಮತ್ತೆ ಜೆಡಿಎಸ್‌ಗೆ ಕರೆತರುವ ಯತ್ನವಾಗಿ ಎಚ್.ಡಿ.ದೇವೇಗೌಡರು ಈಗಾಗಲೇ ಹಲವು ಮುಖಂಡರ ಜತೆ ಮಾತುಕತೆ ನಡೆಸಿದ್ದು ಅದರಂತೆ ಕೋದಂಡರಾಮಯ್ಯ ಅವರ ಜತೆಯೂ ಮಾತನಾಡಿದ್ದರು.
ಜೆಡಿಎಸ್‌ನ ಚಟುವಟಿಕೆಗಳಿಂದ ದೂರ ಉಳಿದಿದ್ದ ಎಂ.ಸಿ.ನಾಣಯ್ಯ ಅವರ ಜತೆ ಮಾತನಾಡಿ ಪಕ್ಷದಲ್ಲಿ ಸಕ್ರಿಯರಾಗುವಂತೆ ಮಾಡುವಲ್ಲಿ ದೇವೇಗೌಡರು ಯಶಸ್ವಿಯಾಗಿದ್ದು, ಮತ್ತೂಬ್ಬ ಮುಖಂಡ ಪಿ.ಜಿ.ಆರ್.ಸಿಂಧ್ಯಾ ಜತೆಗೂ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.
ಸೇರ್ಪಡೆ
ಈ ಮಧ್ಯೆ,ಕರ್ನಾಟಕ ಕೈಸ್ತರ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಅಧ್ಯಕ್ಷ ಭಾಸ್ಕರ್ ಬಾಬು ಹಾಗೂ ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ, ಹಾವೇರಿ, ಹಾಸನ , ಕೋಲಾರ, ಮಂಡ್ಯ, ಕೊಪ್ಪಳ, ಕಾರವಾರ, ಶಿವಮೊಗ್ಗ , ದಾವಣಗೆರೆ, ಬಳ್ಳಾರಿ ಜಿಲ್ಲಾಧ್ಯಕ್ಷರು ಸೇರಿದಂತೆ 28 ಮಂದಿ ಸೋಮವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪಕ್ಷದ ಧ್ವಜ ನೀಡಿ ಎಲ್ಲರನ್ನೂ ಸ್ವಾಗತಿಸಿದರು.