Advertisement

ಎದೆಗೆ ಗುಂಡೇಟು: ಜಪಾನ್ ನಲ್ಲಿ ಅತೀ ಹೆಚ್ಚು ಕಾಲ ಆಳ್ವಿಕೆ ನಡೆಸಿದ ಶಿಂಜೋ ಅಬೆ ಇನ್ನಿಲ್ಲ!

02:35 PM Jul 08, 2022 | Team Udayavani |

ಟೋಕಿಯೋ: ಜಪಾನ್ ದೇಶವನ್ನು ಅತೀ ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದ ಮಾಜಿ ಪ್ರಧಾನಿ ಶಿಂಜೋ ಅಬೆ ಅವರು ಇಂದು ಮೃತರಾಗಿದ್ದಾರೆ. ನಾರಾ ನಗರದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅವರು ಗುಂಡೇಟಿಗೆ ಬಲಿಯಾಗಿದ್ದಾರೆ.

Advertisement

ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ 67 ವರ್ಷದ ಶಿಂಜೋ ಅಬೆ ಅವರ ಎದೆಗೆ ಗುಂಡು ಹಾರಿಸಲಾಗಿದೆ. ಕುಸಿದು ಬಿದ್ದ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಹಲವು ಗಂಟೆಗಳ ಕಾಲ ಸಾವು ಬದುಕಿನ ಹೋರಾಟ ನಡೆಸಿದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ.

1954ರ ಸೆಪ್ಟೆಂಬರ್ 21ರಂದು ಜನಿಸಿದ್ದ ಶಿಂಜೋ ಅಬೆ ಅವರು ಜಪಾನ್ ನಲ್ಲಿ ಅತೀ ಹೆಚ್ಚು ಕಾಲ ಆಳ್ವಿಕೆ ಮಾಡಿದ ಪ್ರಧಾನಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

ಯುದ್ಧಪೂರ್ವ, ಯುದ್ಧಕಾಲ ಮತ್ತು ಯುದ್ಧಾನಂತರದ ಜಪಾನ್‌ ನಾದ್ಯಂತ ಗಮನಾರ್ಹ ಆರ್ಥಿಕ ಪ್ರಭಾವವನ್ನು ಹೊಂದಿರುವ ಪ್ರಮುಖ ರಾಜಕೀಯ ಕುಟುಂಬದಲ್ಲಿ ಶಿಂಜೋ ಅಬೆ ಜನಿಸಿದರು.

2006ರ ಸಪ್ಟೆಂಬರ್ 26ರಂದು ಅಬೆ ಅವರು ಮೊದಲ ಬಾರಿಗೆ ಜಪಾನ್ ನ ಪ್ರಧಾನ ಮಂತ್ರಿಯಾದರು. ಆಗ ಅವರಿಗೆ 52 ವರ್ಷ ವಯಸ್ಸಾಗಿತ್ತು. 2007ರಲ್ಲಿ ಅವರು ಅಧಿಕಾರ ಕಳೆದುಕೊಂಡರು. ಬಳಿಕ 2012-2014ರ ನಡುವೆ ಅವರು ಎರಡನೇ ಬಾರಿ ಪ್ರಧಾನಿಯಾದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾದ ಶಿಂಜೋ ಅಬೆ 2017ರವರೆಗೆ ಆಳ್ವಿಕೆ ನಡೆಸಿದ್ದರು. 2017ರ ಚುನಾಚಣೆಯಲ್ಲಿ ಪುನರಾಯ್ಕೆಯಾದ ಅಬೆ 2020ವರೆಗೆ ಆಳ್ವಿಕೆ ನಡೆಸಿದ್ದರು.

Advertisement

ಅನಾರೋಗ್ಯದಿಂದ ನಿವೃತ್ತಿ: ಜೂನ್ 2020 ರಲ್ಲಿ ಅಬೆ ಅವರ ಆರೋಗ್ಯವು ಹದಗೆಟ್ಟಿತು. ನಿರಂತರ ಆಸ್ಪತ್ರೆ ಭೇಟಿಗಳ ನಂತರ, ಅಬೆ ಅವರು 28 ಆಗಸ್ಟ್ 2020 ರಂದು ಅವರು ಪ್ರಧಾನ ಮಂತ್ರಿಯಾಗಿ ನಿವೃತ್ತಿ ಹೊಂದಲು ಉದ್ದೇಶಿಸಿದ್ದಾರೆ ಎಂದು ಘೋಷಿಸಿದರು. ಸತತ ಆಸ್ಪತ್ರೆ ಭೇಟಿಯ ಕಾರಣದಿಂದ ಪ್ರಧಾನಿಯಾಗಿ ಸರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲವೆಂದು ಉಲ್ಲೇಖಿಸಿ ತನ್ನ ನಿವೃತ್ತಿ ಘೋಷಿಸಿದರು. ಆದರೆ ತನ್ನ ಪಕ್ಷ ಎಲ್ ಡಿಪಿಯು ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ತಾನು ಕಚೇರಿಯಲ್ಲಿ ಉಳಿಯುತ್ತೇನೆ ಎಂದು ಅಬೆ ಸೂಚಿಸಿದರು. ಹೀಗಾಗಿ 2020ರ ಸೆಪ್ಟೆಂಬರ್ 14 ರಂದು ಎಲ್ ಡಿಪಿ ಪಕ್ಷವು ಯೋಶಿಹಿಡೆ ಸುಗಾ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿತು ಅವರು ಸೆಪ್ಟೆಂಬರ್ 16 ರಂದು ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.

ಭಾರತದೊಂದಿಗೆ ಸಂಬಂಧ: ಶಿಂಜೋ ಅಬೆ ಅವರು ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದರು. ಅಲ್ಲದೆ ಭಾರತದ ಜೊತೆಗೂಡಿ ಏಷ್ಯಾದಲ್ಲಿ ಬಲ ಹೆಚ್ಚಿಸುವ ಬಗ್ಗೆ ಕಾರ್ಯತಂತ್ರ ರೂಪಿಸಿದ್ದರು.

2007 ರಲ್ಲಿ ಜಪಾನ್, ಯುನೈಟೆಡ್ ಸ್ಟೇಟ್ಸ್, ಆಸ್ಟ್ರೇಲಿಯಾ ಮತ್ತು ಭಾರತದ ನಡುವೆ ಮಾತುಕತೆ ಪ್ರಾರಂಭಿಸಿದರು. ಆಗಸ್ಟ್ 2007 ರಲ್ಲಿ ಭಾರತಕ್ಕೆ ಅವರ ಮೂರು ದಿನಗಳ ಭೇಟಿಯು ಹೊಸ ದ್ವಿಪಕ್ಷೀಯ ಏಷ್ಯನ್ ಮೈತ್ರಿಗೆ ಮುನ್ನಡಿಯಾಯಿತು.

ಮೂಲಕ ಅಮೆರಿಕ-ಆಸ್ಟ್ರೇಲಿಯಾ, ಅಮೆರಿಕ-ಜಪಾನ್, ಜಪಾನ್-ಆಸ್ಟ್ರೇಲಿಯಾ, ಮತ್ತು ಅಮೆರಿಕ-ಭಾರತದಂತೆ ಐದನೇ ದ್ವಿಪಕ್ಷೀಯ ಕೊಂಡಿಯಾಗಿ ಭಾರತ-ಜಪಾನ್ ಸಂಬಂಧ ಹೊಂದಲು ಅಬೆ ಕ್ರಮ ರೂಪಿಸಿದ್ದರು. ಈ ವ್ಯವಸ್ಥೆಯಲ್ಲಿ ವಿಯೆಟ್ನಾಂ, ದಕ್ಷಿಣ ಕೊರಿಯಾ, ಫಿಲಿಪೈನ್ಸ್ ಮತ್ತು ಇಂಡೋನೇಷ್ಯಾವನ್ನು ಸೇರಿಸುವ ಉಪಕ್ರಮವಾಗಿತ್ತು. ಚೀನಾದ ತಜ್ಞರು ವಿಕಸನಗೊಳ್ಳುತ್ತಿರುವ ಜಿಯೋ-ಸ್ಟ್ರಾಟೆಜಿಕ್ ಮಾದರಿಯನ್ನು “ಏಷ್ಯನ್ ನ್ಯಾಟೋ” ಎಂದು ಲೇಬಲ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next