ಚೆನ್ನೈ: ಭಾರತದ ಮಾಜಿ ಕ್ರಿಕೆಟಿಗ ಎ.ಜಿ. ಮಿಲ್ಖಾ ಸಿಂಗ್ ಶುಕ್ರವಾರ ಚೆನ್ನೈ ಯಲ್ಲಿ ನಿಧನರಾದರು. ಹೃದಯ ಸಂಬಂಧಿ ಕಾಯಿಲೆಗೊಳಗಾಗಿದ್ದ 75ರ ಹರೆಯದ ಸಿಂಗ್ ಅವರನ್ನು ಚೆನ್ನೈ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಅವರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮಿಲ್ಖಾ ಸಿಂಗ್ 1960-61ರ ಅವಧಿಯಲ್ಲಿ ಭಾರತದ ಪರ 4 ಟೆಸ್ಟ್ ಪಂದ್ಯಗಳನ್ನಾಡಿದ್ದರು. ರಿಚಿ ಬೆನೊ ನೇತೃತ್ವದ ಆಸ್ಟ್ರೇಲಿಯ ತಂಡದ 1960ರ ಭಾರತ ಪ್ರವಾಸದ ವೇಳೆ ಮದ್ರಾಸಿನಲ್ಲಿ ನಡೆದ 4ನೇ ಪಂದ್ಯದಲ್ಲಿ ಸಿಂಗ್ ಟೆಸ್ಟ್‌ಕ್ಯಾಪ್ ಧರಿಸಿದ್ದರು. ಎಡಗೈ ಬ್ಯಾಟ್ಸ್‌ಮನ್ ಹಾಗೂ ಶ್ರೇಷ್ಠ ಮಟ್ಟದ ಫೀಲ್ಡರ್ ಆಗಿದ್ದ ಅವರು 16 ಹಾಗೂ 9 ರನ್ ಮಾಡಿ ಔಟಾಗಿದ್ದರು.
ಮಿಲ್ಖಾ ಸಿಂಗ್ ಅವರ ಅಣ್ಣ ಕೃಪಾಲ್ ಸಿಂಗ್ ಕೂಡ ಭಾರತವನ್ನು ಪ್ರತಿನಿಧಿಸಿದ್ದರು. 1961ರಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಮುಂಬಯಿಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇವರಿಬ್ಬರು ಒಟ್ಟಿಗೇ ಆಡಿದ್ದರು. ಇದು ಮಿಲ್ಖಾ ಸಿಂಗ್ ಅವರ ಕೊನೆಯ ಟೆಸ್ಟ್ ಪಂದ್ಯ ಎನಿಸಿತು. ತಮಿಳುನಾಡು ಪರ ರಣಜಿ ಆಡಿದ ಅರ್ಜುನ್ ಕೃಪಾಲ್ ಸಿಂಗ್ ಈ ಕುಟುಂಬದ ಮತ್ತೋರ್ವ ಕ್ರಿಕೆಟಿಗ. ಈತ ಕೃಪಾಲ್ ಸಿಂಗ್ ಅವರ ಪುತ್ರ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅಷ್ಟೇನೂ ಗಮನ ಸೆಳೆಯದ ಮಿಲ್ಖಾ ಸಿಂಗ್, 4 ಪಂದ್ಯಗಳಿಂದ ಗಳಿಸಿದ್ದು ಕೇವಲ 92 ರನ್ ಮಾತ್ರ. ಸರ್ವಾಧಿಕ ಗಳಿಕೆ 35 ರನ್. ಆದರೆ 17ರ ಹರೆಯದಲ್ಲೇ ತಮಿಳುನಾಡು ಪರ ರಣಜಿ ಪಾದಾರ್ಪಣೆ ಮಾಡಿ, 88 ಪ್ರಥಮ ದರ್ಜೆ ಪಂದ್ಯಗಳನ್ನಾಡಿದರು. 8 ಶತಕಗಳ ನೆರವಿನಿಂದ 4,324 ರನ್ ಪೇರಿಸಿದ ಸಾಧನೆ ಇವರದ್ದಾಗಿದೆ.
ಮಿಲ್ಖಾ ಸಿಂಗ್ ನಿಧನಕ್ಕೆ ಅವರ ಸಮಕಾಲೀನ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ, ಹಿರಿಯ ಕೋಚ್ ಎಂ.ಕೆ. ಇಕ್ಬಾಲ್ ಸಂತಾಪ ಸೂಚಿಸಿದ್ದಾರೆ.